ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಬ್ಲ್ಯಾಕ್‍ಮೇಲ್ ರಾಜಕಾರಣ: ತೆಲ್ಕೂರ್ ಆಕ್ರೋಶ

ಕಲಬುರಗಿ:ಜ.31: ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಬ್ಲ್ಯಾಕ್‍ಮೇಲ್ ರಾಜಕಾರಣ ಮಾಡುವುದು ಗೊತ್ತಾಗುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟರೆ ಗ್ಯಾರಂಟಿಗಳು ಮುಂದುವರೆಯುತ್ತವೆ. ಇಲ್ಲವಾದರೆ ಅದು ಬಂದ್ ಆಗಲಿದೆ ಎಂಬ ಹೇಳಿಕೆಯನ್ನು ಶಾಸಕ ಬಾಲಕೃಷ್ಣ ಅವರು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ್ದು ಬೋಗಸ್ ಗ್ಯಾರಂಟಿ ಎಂದು ಬಿಜೆಪಿ ವಿಧಾನಸಭೆಯಲ್ಲಿ ಪ್ರತಿಭಟನೆಯನ್ನೂ ಮಾಡಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಸಕ ಬಾಲಕೃಷ್ಣ ಅವರ ಹೇಳಿಕೆಯು ಸಂವಿಧಾನಕ್ಕೆ ನೂರಕ್ಕೆ ನೂರರಷ್ಟು ವಿರುದ್ಧವಾಗಿದೆ. ಅವರು ಕೊಟ್ಟ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿವೆಯೇ?, ಎಷ್ಟು ಜನ ಬಿಪಿಎಲ್ ಕಾರ್ಡ್‍ದಾರರನ್ನು ಈಹೊತ್ತು ಎಪಿಎಲ್ ಮಾಡಿದ್ದಾರೆ? ಎಂದು ಪ್ರಶ್ನಿಸಿದ ಅವರು, ಪ್ರತಿ ದಿನ ಆಹಾರ ನಿರೀಕ್ಷಕರು, ಆಹಾರ ಶಿರಸ್ತೆದಾರರು ಬಿಪಿಎಲ್ ಕಾರ್ಡ್‍ದಾರರನ್ನು ಎಪಿಎಲ್ ಕಾರ್ಡದಾರರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಬಿಜೆಪಿ ಸರ್ಕಾರವು ಐದು ಕೆಜಿ ಅಕ್ಕಿ ಕೊಡುತ್ತಿದೆ. ಅವರು ಮೂರು ಕೆಜಿ ಅಕ್ಕಿ ನೀಡಿ, ಎರಡು ಕೆಜಿ ರಾಗಿ ಕೊಡುತ್ತಾರೆ. ಐದು ಕೆಜಿ ಅಕ್ಕಿ ಕೊಟ್ಟು ಅದರ ಮೇಲೆ ಎರಡು ಕೆಜಿ ರಾಗಿ ಕೊಡಬಹುದಲ್ಲವೇ?, ದುಡ್ಡು ಕೊಡುತ್ತೇವೆ ಎನ್ನುತ್ತಾರೆ. ಎಷ್ಟು ತಿಂಗಳಿಗೆ ದುಡ್ಡು ಕೊಟ್ಟಿದ್ದಾರೆ? ಎಂದು ಅವರು ಕಿಡಿಕಾರಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಡಿ ಒಂದು ಕಂತು ಬಿಟ್ಟು ಇನ್ಯಾರಿಗಾದರೂ ಹಣ ಬಂದಿದೆಯೇ?, ನೀವು ಯಜಮಾನಿ ಅಲ್ಲ ಎಂಬಿತ್ಯಾದಿ ನೆಪಗಳನ್ನು ಹೇಳುತ್ತ ಸಂಸತ್ ಚುನಾವಣೆಯವರೆಗೂ ತಳ್ಳಿಬಿಟ್ಟರು. ಈಹೊತ್ತು ರಾಜ್ಯ, ದೇಶದಲ್ಲಿ ಬಿಜೆಪಿ ಪರ ಅಲೆ ಇದೆ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಅದಕ್ಕಾಗಿ ಬಾಲಕೃಷ್ಣ ಅವರು ಅಲ್ಲಿ ಹೋಗಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಅವರು ದೂರಿದರು.
ಎಂಟು ತಿಂಗಳಾದರೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಇದ್ದರೂ ಸತ್ತಂತಿದೆ. ದೊಡ್ಡ ಬಳ್ಳಾಪುರದಲ್ಲಿ ರೈತರು ಎರಡು ಸಾವಿರ ರೂ.ಗಳನ್ನು ಹಿಂತಿರುಗಿಸಲು ಮುಂದಾಗಿದ್ದಾರೆ. ಈಹೊತ್ತು ಒಂದು ಎಕರೆ ಕಟಾವು ಮಾಡಲು 4,500ರೂ.ಗಳು ಬೇಕು. ಅವರು ಕೇವಲ ಎರಡು ಸಾವಿರ ರೂ.ಗಳ ಬರ ಪರಿಹಾರ ಕೊಟ್ಟಿದ್ದಾರೆ. ಅಂತಹ ಭಿಕ್ಷೆ ಅವಶ್ಯಕತೆ ಇಲ್ಲ ಎಂದು ಕೆಲವು ರೈತರು ಹೇಳುವಂತಹ ಪರಿಸ್ಥಿತಿಗೆ ರೈತರನ್ನು ತಳ್ಳುತ್ತಿದ್ದಾರೆ. ಅವರ ಸ್ವಾಭಿಮಾನ ಕೆಣಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬರಕ್ಕೂ ಪರಿಹಾರ ಇಲ್ಲ. ಅಭಿವೃದ್ಧಿಗೂ ಅನುದಾನ ಇಲ್ಲ. ಅವಶ್ಯಕತೆ ಇರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಆ ರೀತಿ ಸರ್ಕಾರ ಇದ್ದರೂ ಇಲ್ಲದೇ ಇರುವ ಸ್ಥಿತಿ ಇದೆ. ಕಾಂಗ್ರೆಸ್ ತನ್ನ ಶಾಸಕರ ಹೇಳಿಕೆ ಮೂಲಕ ಸೋಲನ್ನು ಒಪ್ಪಿಕೊಂಡಂತಾಗಿದೆ. ಈ ರೀತಿ ಬ್ಲ್ಯಾಕ್‍ಮೇಲ್ ರಾಜಕಾರಣ, ಜನರನ್ನು ಹೆದರಿಸುವ ಕಾರ್ಯ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.