ಗ್ಯಾರಂಟಿಗಳಿಗೆ ಎಸ್ಸಿ, ಎಸ್ಟಿ ಅನುದಾನ ವರ್ಗಾವಣೆಗೆ ವಿರೋಧ

ಸಂಜೆವಾಣಿ ವಾರ್ತೆಹೂವಿನಹಡಗಲಿ, ಆ.15: ಪರಿಶಿಷ್ಟ ಜಾತಿ, ಪಂಗಡ ಉಪ ಯೋಜನೆಗಳ ಮೀಸಲು ಅನುದಾನವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡುವ ತೀರ್ಮಾನಕ್ಕೆ ಎಸ್ಸಿ, ಎಸ್ಟಿ ಹಕ್ಕುಗಳ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ.ಸಮಿತಿಯ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಕೂಡಲೇ ಸರ್ಕಾರದ ತೀರ್ಮಾನ ಕೈ ಬಿಡುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಸುರೇಶ ಹಲಗಿ ಮಾತನಾಡಿ, ಎಸ್ಸಿ, ಎಸ್ಟಿ ಉಪ ಯೋಜನೆಗಳಿಗೆ ಮೀಸಲಿರಿಸಿರುವ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸಬಾರದು. ಈ ಕುರಿತು ಇತ್ತೀಚಿಗೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಉಪ ಯೋಜನೆಗೆ ಮೀಸಲಿಟ್ಟ ಹಣವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷ ಹೀನಾಯ ಸೋಲು ಕಂಡಿದೆ. ಈ ಸರ್ಕಾರವೂ ಅದೇ ತಪ್ಪು ಮಾಡಲು ಹೊರಟಿರುವುದನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.ಇತ್ತೀಚಿಗೆ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‍ನಲ್ಲಿ ಎಸ್ಸಿ, ಎಸ್ಟಿ ಉಪ ಯೋಜನೆಗಳಿಗೆ 34,293 ಕೋಟಿ ರೂ. ಮೀಸಲಿಟ್ಟಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ದಲಿತ ಸಮುದಾಯಗಳ ಅಭಿವೃದ್ಧಿ ಅನುದಾನವನ್ನು ಗ್ಯಾರಂಟಿಗಳಿಗೆ ವರ್ಗಾಯಿಸುವ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕಿಸಾನ್ ಸಭಾ ಅಧ್ಯಕ್ಷ ಡಿ. ಮುಕುಂದಗೌಡ, ವೈ.ದಡಾರಪ್ಪ, ಅಂಗವಿಕಲರ ಸಂಘದ ಅಧ್ಯಕ್ಷ ಎಸ್.ಚಂದ್ರಪ್ಪ, ರಂಗಪ್ಪ, ಭೋವಿ, ರಾಮಪ್ಪ ಭೋವಿ, ಡಿ.ಸುಧಾಕರ ಇತರರು ಇದ್ದರು.