ಗ್ಯಾಂಗ್‌ಸ್ಟರ್ ಅನ್ಸಾರಿಯನ್ನು ಬಾಂದಾ ಜೈಲ್‌ಗೆ ಕರೆತಂದ ಪೊಲೀಸರು

ಚಂಡೀಗಢ, ಎ.೭- ಕಳೆದ ಎರಡು ವರ್ಷಕ್ಕೂ ಹೆಚ್ಚು ಪಂಜಾಬ್‌ನ ರೂಪ್‌ನಗರ್ ಜೈಲ್‌ನಲ್ಲಿ ದಿನ ಕಳೆದಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್, ಮಾಜಿ ಬಿಎಸ್‌ಪಿ ಶಾಸಕ ಮುಖ್ತಾರ್ ಅನ್ಸಾರಿಯನ್ನು ಬುಧವಾರ ಮುಂಜಾನೆ ರಸ್ತೆ ಮಾರ್ಗದ ಮೂಲಕ ಬಾಂದಾ ಜೈಲ್‌ಗೆ ಕರೆತರಲಾಗಿದೆ.
ಉತ್ತರ ಪ್ರದೇಶದ ಸುಮಾರು ೧೫೦ ಪೊಲೀಸರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೆ ಜಿಪಿಎಸ್ ಆಧಾರಿತ ವಜ್ರಾ ವಾಹನ ಸೇರಿದಂತೆ ಹಲವು ಬಗೆಯ ಬಿಗಿಬಂದೋಬಸ್ತ್‌ಗಳನ್ನು ಅನ್ಸಾರಿಯನ್ನು ಬಾಂದಾ ಜೈಲ್‌ಗೆ ಕರೆತರುವ ವೇಳೆ ಏರ್ಪಡಿಸಲಾಗಿತ್ತು. ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿನನ್ನು ರೂಪ್ ನಗರ ಜೈಲಿನಿಂದ ಏಪ್ರಿಲ್ ೮ರೊಳಗೆ ಕಸ್ಟಡಿಗೆ ತೆಗೆದುಕೊಳ್ಳುವಂತೆ ಪಂಜಾಬ್ ಗೃಹ ಇಲಾಖೆ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರವೇ ಪಂಜಾಬ್‌ಗೆ ತೆರಳಿದ್ದ ಉತ್ತರ ಪ್ರದೇಶದ ಪೊಲೀಸರು ಬುಧವಾರ ಮುಂಜಾನೆ ಅನ್ಸಾರಿಯನ್ನು ವಶಕ್ಕೆ ಪಡೆದು ಬಿಗಿ ಭದ್ರತೆಯಲ್ಲಿ ಕರೆತರಲಾಗಿದೆ. ಪೊಲೀಸ್ ವಾಹನ, ಅಂಬುಲೆನ್ಸ್, ವಜ್ರ ವಾಹನದಲ್ಲಿ ಪೊಲೀಸರು ಬಂದ ಹಿನ್ನೆಲೆಯಲ್ಲಿ ರೂಪ್ ನಗರ ಜೈಲಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ಭಾರೀ ಭದ್ರತೆಯನ್ನು ನೀಡಲಾಗಿತ್ತು. ೨೦೧೯ರ ಜನವರಿಯಿಂದ ಮುಖ್ತಾರ್ ಅನ್ಸಾರಿ ಅವರು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪ್‌ನಗರ ಜೈಲಿನಲ್ಲಿದ್ದ. ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮಾರ್ಚ್ ೨೬ರಂದು ಸುಪ್ರೀಂಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚಿಸಿತ್ತು. ಬಿಎಸ್‌ಪಿ ಶಾಸಕರಾಗಿರುವ ಮುಖ್ತಾರ್ ಮೇಲೆ ಒಟ್ಟು ೫೨ ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೧೫ ವಿಚಾರಣಾ ಹಂತದಲ್ಲಿದೆ. ೨೦೦೫ರಲ್ಲಿ ನಡೆದ ಕೃಷ್ಣಾನಂದ ರೈ ಪ್ರಕರಣದಲ್ಲೂ ಅನ್ಸಾರಿ ಆರೋಪಿಯಾಗಿದ್ದಾರೆ. ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಲ್ಲಬಹುದೆಂಬ ಆತಂಕ ವ್ಯಕ್ತಪಡಿಸಿದ ಅನ್ಸಾರಿ ಪತ್ನಿ ಆಫ್ಶಾನ್ ಅನ್ಸಾರಿ, ಪಂಜಾಬ್ ಜೈಲಿನಿಂದ ಉತ್ತರಪ್ರದೇಶಕ್ಕೆ ಕರೆ ತರುವಾಗ ಯಾವುದೇ ಅಪಾಯವಾಗದಂತೆ ಭದ್ರತೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ೧೯೯೬, ೨೦೦೨, ೨೦೦೭, ೨೦೧೨, ೨೦೧೭ ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ೧೯೯೬ ಮತ್ತು ೨೦೧೭ ರಲ್ಲಿ ಬಿಎಸ್‌ಪಿಯಿಂದ ೨೦೦೨, ೨೦೦೭ ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದರೆ ೨೦೧೨ರಲ್ಲಿ ಕ್ವಾಮಿ ಏಕ್ತಾ ದಳದಿಂದ ಸ್ಪರ್ಧಿಸಿ ವಿಜೇತರಾಗಿದ್ದರು.