ಗ್ಯಾಂಗ್‌ರೇಪ್ ಐವರು ಕಾಮುಕರ ಸೆರೆ

ಮೈಸೂರು, ಆ.೨೮-ರಾಜ್ಯವಲ್ಲದೇ ದೇಶಾದ್ಯಂತ ತಳಮಳ ಸೃಷ್ಟಿಸಿ, ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಚಾಕಚಕ್ಯತೆಯಿಂದ ಭೇದಿಸಿರುವ ನಗರ ಪೊಲೀಸರು, ಐವರು ಕಾಮುಕರನ್ನು ಬಂಧಿಸಿದ್ದಾರೆ.
ಕಳೆದ ಆ. ೨೪ ರಂದು ರಾತ್ರಿ ನಡೆದಿದ್ದ ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪೈಶಾಚಿಕ ಕೃತ್ಯ ನಡೆಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದು ಅದರಲ್ಲಿ ಓರ್ವ ಅಪ್ರಾಪ್ತ ಬಾಲಕನಾಗಿದ್ದಾನೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪೈಶಾಚಿಕ ಕೃತ್ಯದಲ್ಲಿ ಭಾಗಿಯಾಗಿದ್ದ ೬ ಆರೋಪಿಗಳ ಪೈಕಿ ಅಪ್ರಾಪ್ತ ಸೇರಿ ೫ ಮಂದಿಯನ್ನು ಬಂಧಿಸಲಾಗಿದ್ದು, ಅಪ್ರಾಪ್ತನಿಗೆ ೧೭ ವರ್ಷವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಅದರ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದರು.
ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಬಂಧನ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಆರೋಪಿಗಳಲ್ಲಿ ಓರ್ವ ೮, ಮತ್ತೋರ್ವ ೭ ನೇ ತರಗತಿಯವರೆಗೆ ಓದಿದ್ದರೆ, ಇನ್ನೋರ್ವ ಓದಿರಲಿಲ್ಲ, ಮರಗೆಲಸ, ವೈರಿಂಗ್, ವಾಹನ ಚಾಲಕರಾಗಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸಿದರು.
ನಿರ್ಭಯ ಪ್ರಕರಣದ ನಂತರ ಘೋರ ಅಪರಾಧ ಕೃತ್ಯದಲ್ಲಿ ೧೬ ವರ್ಷದ ಮೇಲ್ಮಟ್ಟವರನ್ನು ಕೂಡ ಇತರರಂತೆ ನ್ಯಾಯಾಲಯದ ವಿಚಾರಣೆಗೆ ಒಳಪಡಿಸುವ ಅವಕಾಶವಿದೆ. ಅದರಂತೆ ಮೈಸೂರಿನ ಕೃತ್ಯದಲ್ಲಿ ಭಾಗಿಯಾದ ಅಪ್ರಾಪ್ತನ ವಯಸ್ಸಿನ ನಿಖರತೆ ಪಡೆದು ಮುಂದಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದರು.
ಆರೋಪಿಗಳು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ತಾಳವಾಡಿ ತಾಲೂಕಿನವರಾಗಿದ್ದು ಆಗಾಗ ಮೈಸೂರಿನ ಎಪಿಎಂಸಿ ಬಂಡಿಪಾಳ್ಯದ ಮಾರುಕಟ್ಟೆಗೆ ಟಮೋಟೋ ಆಲೂಗಡ್ಡೆ ಇನ್ನಿತರ ತರಕಾರಿಗಳನ್ನು ತರುತ್ತಿದ್ದು ಎಲ್ಲರೂ ಸ್ನೇಹಿತರಾಗಿರುವ ಕಾರಣಕ್ಕೆ ವಾಹನಗಳಲ್ಲಿ ಬಂದು ಹೋಗುತ್ತಿದ್ದರು.
ತರಕಾರಿ ವಿಲೇವಾರಿ ಮಾಡಿಕೊಂಡು ವಾಪಾಸು ಹೋಗುವಾಗ ಮದ್ಯ ಸೇವಿಸಿ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದರು ಎಂದು ವಿವರಿಸಿದರು.
ಆರೋಪಿಗಳನ್ನು ಬಂಧಿಸಲು ಹೋದಾಗ ತಿರುಪ್ಪೂರು ನಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದವನ ಬೆನ್ನತ್ತಿರುವ ಪೊಲೀಸ್ ತಂಡಗಳು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕ್ರಿಮಿನಲ್ ಹಿನ್ನೆಲೆ:
ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಯಾಗಿದ್ದು ತಮಿಳುನಾಡಿನಲ್ಲಿ ಸಣ್ಣಪುಟ್ಟ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ನಗರ ಹಾಗೂ ದಕ್ಷಿಣ ವಲಯ ಪೊಲೀಸರ ೭ ವಿಶೇಷ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಅವರನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
ಸಂತ್ರಸ್ಥೆ ಅಸಹಕಾರ:
ಪ್ರಕರಣದ ತನಿಖೆಯಲ್ಲಿ ಸಂತ್ರಸ್ಥೆಯಿಂದ ಯಾವುದೇ ರೀತಿಯ ಮಾಹಿತಿ ದೊರೆಯಲಿಲ್ಲ ನಾವ್ಯಾರೂ ಆಕೆಯೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಅದು ಸಹಜ ಕೂಡ ಎಂದು ತಿಳಿಸಿದರು.
ಆದರೆ ಸಂತ್ರಸ್ಥೆಯ ಸ್ನೇಹಿತನಿಂದ ದೊರೆತ ಅಲ್ಪಸ್ವಲ್ಪ ಮಾಹಿತಿ ದೊರೆಯಿತು ಆದರೆ ಅದು ಕೂಡ ಅಸ್ಪಷ್ಟವಾಗಿತ್ತು ಅದನ್ನಿಟ್ಟುಕೊಂಡು ತಾಂತ್ರಿಕ ವೈಜ್ಞಾನಿಕ ಆಧಾರದ ಮೇಲೆ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಸಂಚು ಅಸ್ಪಷ್ಟ:
ಆರೋಪಿಗಳು ಸಂಚು ರೂಪಿಸಿದರೆ ಅತಾಚುರ್ಯದಿಂದ ಕೃತ್ಯ ನಡೆಯಿತೇ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಆದರೆ ಹೇಗಾದರೂ ನಡೆಯಲಿ ಅದು ಪೈಶಾಚಿಕ ಕೃತ್ಯ ಎಂದು ಹೇಳಿದರು.
ಕೃತ್ಯ ನಡೆಸಿದ ಆರೋಪಿಗಳು ೩ ಲಕ್ಷ ಕೇಳಿದ್ದರು ಸ್ನೇಹಿತನ ತಂದೆಯಿಂದ ಹಣ ತರಿಸುವ ಪ್ರಯತ್ನ ನಡೆದಿತ್ತಾದರೂ ಅದು ವಿಫಲವಾಗಿದೆ ಎಂದರು.
ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಚಲನವಲನದ ಮೇಲೆ ನಿಗಾವಹಿಸಿದ್ದರು ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ೩ ದಿನಗಳ ಕಾಲ ಒಂದೇ ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿ ೩ ದಿನಗಳ ಹಿಂಬಾಲಿಸಿ ಸಂಚು ರೂಪಿಸಿ ನಾಲ್ಕನೇ ದಿನ ಆ.೨೪ ರಂದು ದಾಳಿ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದರ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.
೫ಲಕ್ಷ ಬಹುಮಾನ:
ಆರೋಪಿಗಳನ್ನು ಸುಮಾರು ೩೦ ಗಂಟೆಗಳೊಳಗೆ ಬಂಧಿಸಿದ ಪೊಲೀಸ್ ತಂಡಗಳಿಗೆ ೫ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ ಎಂದರು.
ಕಾರ್ಯಾಚರಣೆ ಯಶಸ್ವಿ:
ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸಿರುವುದನ್ನು ಮೈಸೂರಿನಲ್ಲಿಯೇ ಇದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬೆಳಿಗ್ಗೆ ಖಚಿತ ಪಡಿಸಿದ್ದರು
ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸ್ಥಳಕ್ಕೆ ನಿನ್ನೆ ಬೆಳಿಗ್ಗೆಯೇ ಭೇಟಿ ಅಲ್ಲಿಯೇ ಉಳಿದುಕೊಂಡು ಅಧಿಕಾರಿಗಳ ಸಭೆ ನಡೆಸಿ ಸತತ ಮಾಹಿತಿಯನ್ನು ಪಡೆಯುತ್ತಿದ್ದ ಸಚಿವರು ಇಂದು ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿ ಕಾಮುಕರನ್ನು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದರು.ಬಾಕ್ಸ್ – ೧
ಗ್ಯಾಂಗ್‌ರೇಪ್ ಸಂತ್ರಸ್ಥೆ ಮುಂಬೈಗೆ

ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯು ಮುಂಬಯಿಗೆ ತೆರಳಿದ್ದಾರೆ.
ತಮಿಳುನಾಡು, ಮುಂಬೈನಿಂದ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ ಕರೆತಂದ ಬೆನ್ನಲ್ಲೇ ಸಂತ್ರಸ್ಥೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮುಂಬೈಗೆ ತೆರಳಿದ್ದಾರೆ.
ಪೋಷಕರ ಜೊತೆಗೆ ಸಂತ್ರಸ್ಥ ಯುವತಿ ನಿನ್ನೆಯೇ ಮುಂಬೈಗೆ ತೆರಳಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು, ತಾವು ಯಾರನ್ನೂ ಭೇಟಿಯಾಗೋದಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಬಸ್ ಟಿಕೆಟ್ ಬಾಟಲಿಯಿಂದ ಪತ್ತೆ

ಬಸ್ ಟಿಕೆಟ್ ಹಾಗೂ ಬಿಯರ್‌ನ ಖಾಲಿ ಬಾಟಲಿಯ ಸುಳಿವು ಆಧರಿಸಿ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪತ್ತೆಹಚ್ಚಲಾಗಿದೆ.
ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಬಿಯರ್ ಬಾಟಲಿ, ತಳವಾಡಿಯ ಬಸ್ ಟಿಕೆಟ್ ಹಾಗೂ ಸಂತ್ರಸ್ಥೆಯ ಸ್ನೇಹಿತನ ಹೇಳಿಕೆ ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು, ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೂ ಮೊದಲ ಮೂರು ದಿನಗಳ ಕಾಲ ಸಂತ್ರಸ್ತೆ, ಸ್ನೇಹಿತ ಘಟನಾ ಸ್ಥಳಕ್ಕೆ ಬಂದಿರುವುದನ್ನು ಗಮನಿಸಿ ೪ನೇ ದಿನ ಕೃತ್ಯ ಎಸಗಿ ಪರಾರಿಯಾಗಿದ್ದರು.