ಗ್ಯಾಂಗ್​​ಸ್ಟರ್​ ಅತೀಕ್​ ಮತ್ತವನಸಹೋದರನ ಗುಂಡಿಕ್ಕಿ ಕೊಲೆ ಮೂವರು ಸೆರೆ

ಲಕ್ನೋ(ಉತ್ತರಪ್ರದೇಶ),ಏ.16- ಗ್ಯಾಂಗ್​​ಸ್ಟರ್​, ರಾಜಕಾರಣಿಯಾಗಿದ್ದ ಅತೀಕ್​ ಅಹ್ಮದ್​ ಮತ್ತು ಅವರ ಸಹೋದರ ಅಶ್ರಫ್​​ ಅವರನ್ನು ಕೊಲೆ ಮಾಡಿದ ಮೂವರು
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲವಲೇಶ್​ ತಿವಾರಿ, ಸನ್ನಿ ಸಿಂಗ್​ ಹಾಗೂ ಅರುಣ್​ ಮೌರ್ಯ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ಲವಲೇಶ್​ ಎಂಬಾತ ನಿರುದ್ಯೋಗಿ, ಮಾದಕ ವ್ಯಸನಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಈ ಬಗ್ಗೆ ಆತನ ಕುಟುಂಬಸ್ಥರೇ ಮಾಹಿತಿ ನೀಡಿದ್ದು, ಅತೀಕ್​ ಕೊಲೆ ಆರೋಪಿ ಲವಲೇಶ್​ ಹೇಗೆ ಅಲ್ಲಿಗೆ ಹೋದ ಎಂಬುದರ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಅವನು ಮಾದಕ ವ್ಯಸನಿಯಾಗಿದ್ದು, ಅವನೊಂದಿಗೆ ನಮಗೆ ಯಾವುದೇ ಸಂಬಂಧ ಉಳಿದಿಲ್ಲ. ಕುಟುಂಬದೊಂದಿಗೆ ಆತ ವಾಸಿಸುತ್ತಿಲ್ಲ.
ನಮ್ಮನ್ನು ತೊರೆದಿರುವ ಆತ ವಾರದ ಹಿಂದೆ ಮನೆಗೆ ಬಂದು ಭೇಟಿ ಮಾಡಿದ್ದ. ಈ ಹಿಂದೆ ಪ್ರಕರಣವೊಂದರಲ್ಲಿ ಲವಲೇಶ್​ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂಬುದನ್ನೂ ಆತನ ತಂದೆ ಬಹಿರಂಗಪಡಿಸಿದ್ದಾರೆ.ಇನ್ನೊಬ್ಬ ಆರೋಪಿ ಸನ್ನಿ ಸಿಂಗ್​ ಸಹೋದರ ಮಾತನಾಡಿ, ಗ್ಯಾಂಗ್​ಸ್ಟರ್​ ಅತೀಕ್​ ಮತ್ತು ಅಶ್ರಫ್​ರನ್ನು ಕೊಂದಿದ್ದು ತಮಗೆ ಮಾಹಿತಿ ಇಲ್ಲ. ಸನ್ನಿ ಸದ್ಯಕ್ಕೆ ನಿರುದ್ಯೋಗಿಯಾಗಿದ್ದು, ಏನೂ ಕೆಲಸವಿಲ್ಲದೇ ಅಲೆದಾಡುತ್ತಿದ್ದ. ಆತನ ಜೊತೆಗೆ ನಮಗೆ ಉತ್ತಮ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಏನಾಯ್ತು:
ಪೊಲೀಸರು ಗ್ಯಾಂಗ್​ಸ್ಟರ್​ಗಳಾದ ಅತೀಕ್​ ಅಹ್ಮದ್​ ಮತ್ತು ಅಶ್ರಫ್​ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಪತ್ರಕರ್ತರ ವೇಷದಲ್ಲಿದ್ದ ಮೂವರು ಆರೋಪಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಅತೀಕ್​ ತನ್ನ ಮಗನ ಶವಸಂಸ್ಕಾರಕ್ಕೆ ಏಕೆ ಹೋಗಲಿಲ್ಲ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ತಲೆಗೆ ನೇರವಾಗಿ ಪಿಸ್ತೂಲು ಇಟ್ಟು ಗುಂಡು ಹಾರಿಸಿದ್ದಾನೆ. ಬಳಿಕ ಪಕ್ಕದಲ್ಲಿದ್ದ ಅಶ್ರಫ್​​ನ ಮೇಲೂ ಮೂವರು ಸೇರಿ ದಾಳಿ ಮಾಡಿದ್ದಾರೆ.
ಇದರಿಂದ ಇಬ್ಬರೂ ಧರೆಗುರುಳಿದ್ದಾರೆ. ಆದರೂ ಬಿಡದ ಆರೋಪಿಗಳು ಸತತವಾಗಿ ಗುಂಡು ಹಾರಿಸಿದ್ದಾರೆ. ಬಳಿಕ ಗನ್​ಗಳನ್ನು ಬಿಸಾಡಿ ಪೊಲೀಸರಿಗೆ ಶರಣಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಶವಗಳನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಅತೀಕ್​ ಮೇಲೆ ದಾಳಿ ಮಾಡಿದರು ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ವಿಚಾರಣೆ ನಡೆಸಲಾಗುತ್ತಿದೆ.
ಇಂದ ಸಂಜೆಯೊಳಗೆ ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಹತ್ಯೆ ಘಟನೆಯ ಬಳಿಕ ಸಿಎಂ ಯೋಗಿ ಆದಿತ್ಯನಾಥ್​ ನ್ಯಾಯಾಂಗ ತನಿಖೆಗೆ ಸೂಚಿಸಿದ್ದಾರೆ. ಮೂವರು ಸದಸ್ಯರ ಸಮಿತಿ ರಚನೆಗೆ ಆದೇಶಿಸಿದ್ದು, ಜನರಿಗೆ ತೊಂದರೆಯಾಗದಂತೆ ರಾಜ್ಯದಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ರಾತ್ರಿಯಿಂದಲೇ ಪೊಲೀಸರು ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.