ಗ್ಯಾಂಗ್‌ಸ್ಟರ್‌ಗಳಿಗೆ ಎನ್‌ಐಎ ಶಾಕ್

ನವದೆಹಲಿ, ಸೆ. ೧೨- ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಳ್ಳಂಬೆಳಿಗ್ಗೆ ದೇಶಾದ್ಯಂತ ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ ಮನೆ ಹಾಗೂ ಮತ್ತಿತರ ೬೦ಕ್ಕೂ ಹೆಚ್ಚು ಸ್ಥಳಗಳ ಮೇಲೆ ಹಠಾತ್ ದಾಳಿ ಮಾಡಿದೆ.ಪ್ರಮುಖವಾಗಿ ಹರಿಯಾಣ, ಪಂಜಾಬ್, ರಾಜಸ್ತಾನ, ದೆಹಲಿ ಸೇರಿದಂತೆ, ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ನಿರತವಾಗಿದೆ. ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿಗಳಾಗಿರುವ ಲಾರೆನ್ಸ್ ಬಿಷ್ಣೋಯಿ ಅವರಿಗೆ ಸೇರಿರುವ ಅನೇಕ ಸ್ಥಳಗಳ ಮೇಲೆ ದಾಳಿ ನಡೆದಿದೆ.
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭೂಗತ ಲೋಕದ ಕೈವಾಡವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.ಪಂಜಾಬಿ ಗಾಯಕ ಮೂಸೆವಾಲಾ ಅವರನ್ನು ಮೇ ತಿಂಗಳಿನಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಮೂಸೆವಾಲಾ ಹತ್ಯೆ ನಡೆದಿತ್ತು.ದೇಶದಲ್ಲಿ ಸಕ್ರಿಯವಾಗಿರುವ ಅಪರಾಧ ಚಟುವಟಿಕೆ ಹಿನ್ನೆಲೆ ಇರುವ ಗ್ಯಾಂಗ್ ಗಳ ಮೇಲೆ ಎನ್ ಐ ಎ ಹದ್ದಿನಕಣ್ಣಿಟ್ಟಿದೆ. ಪ್ರಮುಖವಾಗಿ ಲಾರೆನ್ಸ್ ಬಿಷ್ಣೋಯಿ ಮತ್ತವರ ಗ್ಯಾಂಗ್ ಮೇಲೆ ನಿಗಾವಹಿಸಿದೆ.
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೂ ಬಿಷ್ಣೋಯಿ ಗ್ಯಾಂಗ್ ಪಿತೂರಿ ನಡೆಸಿದ ಅಂಶವು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಎನ್ ಐ ಎ ಈ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.