ಗ್ಯಾಂಗ್‌ವಾರ್ ಹತ್ತಿಕ್ಕಲು ಸೇನೆ ನೆರವು

ಸ್ಟಾಕ್‌ಹೋಮ್ (ಸ್ವೀಡನ್), ಸೆ.೨೯- ಅತ್ಯಂತ ಶ್ರೀಮಂತ, ಪ್ರಕೃತಿ ರಮಣೀಯ ಹಾಗೂ ಅಭಿವೃದ್ದಿ ಹೊಂದಿದ್ದ ಶಾಂತಿಯುತ ರಾಷ್ಟ್ರಗಳಲ್ಲಿ ಒಂದೆಂಬ ಹೆಗ್ಗಲಿಕೆ ಪಡೆದಿರುವ ಸ್ವೀಡನ್‌ನಲ್ಲಿ ಸದ್ಯ ಗ್ಯಾಂಗ್‌ವಾರ್‌ನಿಂದಾಗಿ ಪರಿಸ್ಥಿತಿ ಮಿತಿಮೀರಿದೆ. ಸದ್ಯ ಗ್ಯಾಂಗ್‌ವಾರಗಳನ್ನು ನಿಗ್ರಹಿಸುವ ಸಲುವಾಗಿ ಇದೀಗ ಸ್ವತಹ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಸೇನೆಯ ನೆರವು ಪಡೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಲ್ಫ್, ಕ್ರಿಮಿನಲ್ ಗ್ಯಾಂಗ್‌ಗಳ ವಿರುದ್ಧ ತಮ್ಮ ಕೆಲಸದಲ್ಲಿ ಸಶಸ್ತ್ರ ಪಡೆಗಳು ಪೊಲೀಸರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಲು ಶುಕ್ರವಾರ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಮತ್ತು ರಾಷ್ಟ್ರೀಯ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ. ಸ್ವೀಡನ್ ಈ ಹಿಂದೆಂದೂ ಈ ರೀತಿಯದ್ದನ್ನು ನೋಡಿಲ್ಲ. ಅಲ್ಲದೆ ಯುರೋಪಿನ ಯಾವುದೇ ದೇಶವು ಈ ರೀತಿಯದನ್ನು ನೋಡುತ್ತಿಲ್ಲ. ಸದ್ಯ ಇದೊಂದು ಸ್ವೀಡನ್‌ನ ಕಠಿಣಕಾರಿ ಸಮಯವಾಗಿದೆ. ರೌಡಿಗಳ ಗುಂಪನ್ನು ಬೇಟೆಯಾಡಿ, ನಿಗ್ರಹಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಪ್ರಸಕ್ತ ಸೆಪ್ಟೆಂಬರ್ ತಿಂಗಳೊಂದರಲ್ಲೇ ಗ್ಯಾಂಗ್‌ವಾರ್‌ನಿಂದಾಗಿ ೧೧ ಮಂದಿ ಮೃತಪಟ್ಟಿದ್ದು, ರೌಡಿಗಳ ಅಟ್ಟಹಾಸ ಮುತ್ತೆ ಮುಂದುವರೆದಿದೆ. ಗುಂಡಿನ ದಾಳಿ ಹಾಗೂ ಬಾಂಬ್ ದಾಳಿಗಳು ಕೂಡ ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ಶಾಂತಿಪ್ರಿಯ ಜನರು ರಸ್ತೆಯಲ್ಲಿ ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅದೂ ಅಲ್ಲದೆ ಈ ಬಗ್ಗೆ ಅನೇಕ ದೂರುಗಳು ಕೂಡ ಸಂಬಂಧಪಟ್ಟ ಇಲಾಖೆಗೆ ನೀಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪ್ರಧಾನಿ ಇದೀಗ ಸೇನಾ ನಾಯಕ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ. ಸ್ವೀಡನ್‌ನಲ್ಲಿ ಸುಮಾರು ೩೦,೦೦೦ಕ್ಕೂ ಹೆಚ್ಚಿನ ಜನರು ಗ್ಯಾಂಗ್ ಅಪರಾಧಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ ಅಥವಾ ಸಂಬಂಧವನ್ನು ಹೊಂದಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಹಿಂಸಾಚಾರವು ಪ್ರಮುಖ ನಗರ ಪ್ರದೇಶಗಳಿಂದ ಸಣ್ಣ ಪಟ್ಟಣಗಳಿಗೆ ಕೂಡ ಹರಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.