ಗೌರವಯುತ ಬದುಕಿಗಾಗಿ ಹೋರಾಟ ನಡೆಸುವ ದುಸ್ಥಿತಿ

ದಾವಣಗೆರೆ,ಡಿ.23: ಪುನರ್ವಸತಿ ಹಾಗೂ ಗೌರವಯುತ ಬದುಕು ಕಟ್ಟಿಕೊಳ್ಳಲು ಸಫಾಯಿ ಕರ್ಮಚಾರಿಗಳು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಶೋಚನೀಯ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು, ವಕೀಲರು ಆದ ಎಲ್.ಎಚ್.ಅರುಣಕುಮಾರ್ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ರೋಟರಿ ಬಾಲ ಭವನದಲ್ಲಿಂದು ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯಿಂದ ಮ್ಯಾನುಯಲ್ ಸ್ಕಾö್ಯವೆಂರ‍್ಸ್ಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ನಾಯಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲರೂ ಘನತೆಯಿಂದ ಬದುಕಬೇಕು, ಸರ್ವರಿಗೂ ಸಾಮಾಜಿಕ ನ್ಯಾಯಸಿಗಬೇಕು ಮತ್ತು ಶ್ರಮಿಕ ವರ್ಗ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರö್ಯ ಸಿಗಬೇಕೆನ್ನುವುದು ಸಂವಿಧಾನದ ಆಶಯವಾಗಿದೆ. ಆದರೆ, ವಾಸ್ತವವಾಗಿ ಇಂದಿಗೂ ಸಮಾಜದಲ್ಲಿ ಅಸಮಾನತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.ಇಂದಿಗೂ ಮಲ ಹೊರುವ ಮತ್ತು ಬಾಚುವ ಪದ್ಧತಿ ಜೀವಂತವಾಗಿರುವುದು ದೇಶಕ್ಕೆ ದೊಡ್ಡ ಕಳಂಕವಾಗಿದೆ. ಆಧುನಿಕ ಉಪಕರಣ ಬಳಸಿ ಮಲ ಗುಂಡಿಗಳನ್ನು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂಬ ನಿಯಮವಿದ್ದರೂ ಸಫಾಯಿ ಕರ್ಮಚಾರಿಗಳನ್ನು ಯಾವುದೇ ಸುರಕ್ಷತೆ ಇಲ್ಲದೇ ಮಲ ಗುಂಡಿಗೆ ಇಳಿಸಿ ಮಲ ಬಾಚಲು ಹಚ್ಚಿ, ಅವರ ಸಾವಿಗೆ ಕಾರಣವಾಗುತ್ತಿದೆ ಎಂದರು.ಸಮಾಜದಲ್ಲಿ ಇನ್ನೂ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಜಾತಿ ಪದ್ಧತಿಗಳಂತಹ ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿವೆ. ಇವು ತೊಲಗಬೇಕಾದರೆ, ಜನರ ಮನಸ್ಸು ಸ್ವಚ್ಛಗೊಳಿಸುವ ಕಾರ್ಯ ಮೊದಲಾಗಬೇಕು ಎಂದ ಅವರು, ಯಾವುದೇ ಸಂದರ್ಭದಲ್ಲಿ ನಿಮ್ಮ ಹಕ್ಕುಗಳು ಉಲ್ಲಂಘನೆಯಾದಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದು ಅರ್ಜಿ ನೀಡಿದರೆ, ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು.ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್ ಮಾತನಾಡಿ, 2015ರಿಂದ ನಮ್ಮ ಕಾವಲು ಸಮಿತಿ ನಡೆಸಿದ ಹೋರಾಟದ ಭಾಗವಾಗಿ ಇಂದು ಎಲ್ಲಾ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಸರ್ಕಾರ ಗುರುತಿನ ಚೀಟಿ ನೀಡಿದೆ. ಆದರೆ, ಮಲ ಬಾಚುವ ಭಂಗಿಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ ನಮ್ಮ  ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಆದ್ದರಿಂದ ನೀವೆಲ್ಲರೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಮಂಜಮ್ಮ, ಕಾವಲು ಸಮಿತಿಯ ವಾಸುದೇವ, ಬಾಬು ಮತ್ತಿತರರು ಉಪಸ್ಥಿತರಿದ್ದರು.