ಗೌರವಧನದ ವಿಕಲಚೇತನ ಕಾರ್ಯಕರ್ತರಿಗೆ ಖಾಯಂಗೊಳಿಸಲು ಆಗ್ರಹಿಸಿ ಆ. 8ರಂದು ಅಹೋರಾತ್ರಿ ಧರಣಿ

ಕಲಬುರಗಿ.ಆ.3:ಎಂಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ, ಯುಆರ್‍ಡಬ್ಲ್ಯೂ ಗೌರವ ಧನ ಕಾರ್ಯಕರ್ತರಿಗೆ ಖಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 8ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವಿಕಲಚೇತನ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ. ಮೇಟಿ ಅವರು ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ರಾಷ್ಟ್ರೀಯ ವಿಕಲಚೇತನರ ಪುನರ್ವಸತಿ ಯೋಜನೆ ಅಡಿ 2007ರಲ್ಲಿ ಸುಮಾರು 6500ಕ್ಕಿಂತ ಹೆಚ್ಚು ವಿಕಲಚೇತನರು ಗೌರವಧನದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಯೋಜನೆಯ ಪ್ರಾರಂಭದಲ್ಲಿ ಮಾಸಿಕ 750ರೂ.ಗಳು, ನಂತರ ಮಾಸಿಕ 1500ರೂ.ಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದರು. ಈಗ ಮಾಸಿಕ 6000ರೂ.ಗಳು ಹಾಗೂ ಎಂಆರ್‍ಡಬ್ಲ್ಯೂಗಳಿಗೆ 12000ರೂ.ಗಳ ಗೌರವಧನವನ್ನು ಸರ್ಕಾರ ನೀಡುತ್ತಿದೆ. ಯೋಜನೆಯಡಿ ಜಿಲ್ಲೆಯಲ್ಲಿ 7 ಜನ ಎಂಆರ್‍ಡಬ್ಲ್ಯೂ, ಹತ್ತು ಜನ ಯುಆರ್‍ಡಬ್ಲ್ಯೂ ಹಾಗೂ 268 ವಿಆರ್‍ಡಬ್ಲ್ಯೂಗಳು ಕೆಲಸ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ರಾಜ್ಯದ ವಿಕಲಚೇತನರಿಗೆ ನೇರವಾಗಿ ತಲುಪಲಿ ಎಂಬ ಉದ್ದೇಶದಿಂದ 2007ರಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಭರ್ತಿ ಮಾಡಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಮಾತ್ರ ಇಲಾಖೆಯ ಮೂಲಕವೇ ಜಾರಿಯಾಗುವ ಯೋಜನೆಗಳ ಪ್ರಗತಿಗಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆದಾಗ್ಯೂ, ಈಗ ನಿರಂತವಾಗಿ ಕೆಲಸ ಮಾಡುತ್ತಿದ್ದೇವೆ. ಹಗಲು- ರಾತ್ರಿ ಎನ್ನದೇ ಕೆಲಸ ಮಾಡಿದರೂ ಕೂಡ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ನೀವು ಕೆಲಸ ಮಾಡುತ್ತಿಲ್ಲ. ನಿಮ್ಮನ್ನು ತೆಗೆದುಹಾಕುತ್ತೇವೆ ಎಂದು ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಕೆಲಸ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
15 ವರ್ಷಗಳ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸುವಂತೆ ಒತ್ತಾಯಿಸಿದ ಅವರು, ಅಫಜಲಪುರ ತಾಲ್ಲೂಕಿನಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ಬಸವರಾಜ್ ಜೆ. ಹಡಪದ್ ಅವರನ್ನು ತೆಗೆದುಹಾಕಿದ್ದು ಕೂಡಲೇ ಅವರನ್ನು ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಹೊಟ್ಟೆಪಾಡಿಗಾಗಿ ಹುಟ್ಟಿಕೊಂಡಿರುವ ಎನ್‍ಜಿಓಗಳ ಖಾಸಗಿ ಕೆಲಸ- ಕಾರ್ಯಗಳನ್ನು ರಾಜ್ಯದ ವಿಆರ್‍ಡಬ್ಲ್ಯೂ, ಎಂಆರ್‍ಡಬ್ಲ್ಯೂಗಳ ಮೂಲಕ ಮಾಡಿಸಬಾರದು. ಕೇವಲ ಸರ್ಕಾರ ಮತ್ತು ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದ ಯುಆರ್‍ಡಬ್ಲ್ಯೂಗಳಿಗೆ ಮಹಾನಗರ ಪಾಲಿಕೆಯಲ್ಲಿ ಶೇಕಡಾ 5ರಷ್ಟು ಅನುದಾನದಲ್ಲಿ ಕಂಪ್ಯೂಟರ್ ಕೊಡಿಸುವಂತೆ, ಖಾಯಂ ಆಗಿ ಕುಳಿತು ಕೆಲಸ ಮಾಡಲು ಟೇಬಲ್, ಖುರ್ಚಿ, ಕೋಣೆಗಳ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ವಿಕಲಚೇತನರ ಪರವಾಗಿ ಸಾಮಾಜಿಕ ಸೇವೆ ಸಲ್ಲಿಸುವ ರಾಜ್ಯದ ಯಾವುದೇ ಎನ್‍ಜಿಓಗಳು ನೇರವಾಗಿ ಎಂಆರ್‍ಡಬ್ಲ್ಯೂ, ಯುಆರ್‍ಡಬ್ಲೂ ಹಾಗೂ ವಿಆರ್‍ಡಬ್ಲ್ಯೂಗಳಿಗೆ ರಾಜ್ಯದ ವಿಕಲಚೇತನರ ಮಾಹಿತಿ ಹಾಗೂ ದಾಖಲಾತಿಗಳನ್ನು ನೇರವಾಗಿ ಕೇಳಬಾರದು. ಇಲಾಖೆಯ ಮೂಲಕವೇ ಪಡೆದುಕೊಳ್ಳುವ ಸಂಬಂಧ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ ಅವರು, ಎಲ್ಲ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಹೋರಾಟ ರೂಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತುಳಸಿರಾಮ್ ಹಿರೋಳಿ, ಖಾಸಿಂಸಾಬ್ ಇ. ಡೊಂಗರಗಾಂವ್, ಶರಣು ಎಸ್. ಹತ್ತರಕಿ, ರಾಜೇಂದ್ರ ಅ. ಕಮಕನೂರ್, ಮಲ್ಲಿಕಾರ್ಜುನ್ ಪಿ. ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.