ಗೌರವದ ಬದುಕು ನೀಡಿದ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸೋಣ

ವಿಜಯಪುರ,ಜ.29:ಭಾರತದ ಸಂವಿಧಾನವು ಸಮಸ್ತ ಭಾರತೀಯರಿಗೆ ಗೌರವದ ಬದುಕನ್ನು ನೀಡಿದೆ. ಅಂಥ ಸಂವಿಧಾನವನ್ನು ಗೌರವಿಸುವುದು ಭಾರತೀಯರಾದವರ ಕರ್ತವ್ಯ ಎಂದು ಝೆನ್ ಬೌದ್ಧ ಭಿಕ್ಷು ಡಾ. ಶಾಕು ಬೋಧಿಧಮ್ಮ ಹೇಳಿದರು.

ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಫುಲೆ-ಶಾಹು-ಅಂಬೇಡ್ಕರ್ ಸ್ಟುಡೆಂಟ್ಸ್ ಫೆಡರೇಷನ್, ಬುದ್ಧ-ಬಸವ-ಅಂಬೇಡ್ಕರ್ ಮಿಷನ್, ಬುದ್ಧ ವಿಹಾರ ನಿರ್ಮಾಣ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಂವಿಧಾನ ಸಮ್ಮಾನ್ ರ್ಯಾಲಿ”ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತದ ಎಲ್ಲ ಜಾತಿ ಜನಾಂಗದವರಿಗೆ, ಎಲ್ಲ ಧರ್ಮೀಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಧ್ವನಿಯಿಲ್ಲದ ಶೋಷಿತ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಧ್ವನಿ ನೀಡಿದ್ದಲ್ಲದೆ, ಅವರಿಗೆ ಗೌರವಯುತ ಬದುಕು ನೀಡಿದ್ದಾರೆ. ಆದರೆ ಕೆಲವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಾರೆ. ಕೇಂದ್ರ ಸರಕಾರದ ಒಬ್ಬ ಮಂತ್ರಿ ತಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಹಿರಂಗವಾಗಿ ಹೇಳುತ್ತಾರೆ. ಸಂವಿಧಾನ ಬದಲಾದರೆ ಪ್ರಜಾಪ್ರಭುತ್ವದ ಸೌಧವೇ ಕುಸಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಸಂವಿಧಾನ ಅಪಾಯದಲ್ಲಿದೆ ಎಂದು ಮನಗಂಡ ಅನೇಕ ಸಮಾನತಾವಾದಿ ಸಂಘಟನೆಗಳು, ಲೇಖಕರು, ಚಿಂತಕರು ಸಂವಿಧಾನ ರಕ್ಷಣಾ ಹೋರಾಟಗಳನ್ನು ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಸಂವಿಧಾನವನ್ನು ಗೌರವಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ಅರಿತಾಗ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ ಎಂದು ಭಂತೆ ಬೋಧಿಧಮ್ಮ ಹೇಳಿದರು.

ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭವಾದ ಸಂವಿಧಾನ ಸಮ್ಮಾನ್ ರ್ಯಾಲಿಯು ನಗರದ ಪ್ರಮುಖ ಬೀದಿಗಳ ಮೂಲಕ ಹಾಯ್ದು, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಂಚರಿಸಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಮುಕ್ತಾಯಗೊಂಡಿತು. ಭಂತೆ ಬೋಧಿಧಮ್ಮ ರ್ಯಾಲಿಯ ನೇತೃತ್ವ ವಹಿಸಿದ್ದರು.

ಹಿರಿಯ ಪತ್ರಕರ್ತ ಅನಿಲ ಹೊಸಮನಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನು ಕಟ್ಟಿಮನಿ ಅವರು ರ್ಯಾಲಿಗೆ ಚಾಲನೆ ನೀಡಿದರು.

ಯುವ ಮುಖಂಡರಾದ ಸಂಜು ಗುನ್ನಾಪುರ, ರಮೇಶ ಬೋರಗಿ, ಸಂತೋಷ ಕಾಂಬಳೆ, ಸುಜಲ ಕಾಂಬಳೆ, ಪವನ್ ಚೌಡಿಕರ, ರಕ್ಷಿತ್ ಗುನ್ನಾಪುರ, ಆನಂದ ಔರಂಗಾಬಾದ, ಸಂಘರ್ಷ ಹೊಸಮನಿ, ಅನಂತ ವರಕನಹಳ್ಳಿ, ಸಿದ್ರಾಮ ವೀರಕರ, ರಾಜರತ್ನ ಕಾಂಬಳೆ, ಆದರ್ಶ ಕೋಟ್ಯಾಳ, ಅಜಿತ ಕಟ್ಟಿಮನಿ, ಪ್ರತಾಪ ಚಿಕ್ಕಲಕಿ, ಕೀರ್ತಿಕುಮಾರ ಕಾಖಂಡಕಿ ಸೇರಿದಂತೆ ನೂರಾರು ಯುವಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು.