
ಕರಜಗಿ :ಮೇ.24:ಅಫಜಲಪುರ ತಾಲೂಕಿನ ಗೌರ(ಬಿ) ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು,ಇದರಿಂದ ಮಕ್ಕಳು ಮದ್ಯ ವ್ಯಸನಕ್ಕೆ ಈಡಾಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಗ್ರಾಮದ ಮಹಿಳೆಯರು ಶಾಸಕ ಎಂ.ವೈ.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಶಾಸಕ ಎಂ.ವೈ.ಪಾಟೀಲ್ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ,ತಾಲೂಕಿನ ಗೌರ(ಬಿ) ಗ್ರಾಮದಲ್ಲಿ ಅಕ್ರಮವಾಗಿ ಪಾನ್ ಶಾಪ್ ಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದರು.ಗ್ರಾಮದ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದಾಗಿ ಮಕ್ಕಳು ಮದ್ಯ ವ್ಯಸನಕ್ಕೆ ದಾಸರಾಗುತ್ತಿದ್ದಾರೆ.ಇದರಿಂದಾಗಿ ಸಂಸಾರಗಳು ಬೀದಿ ಪಾಲಾಗುತ್ತಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಕೂಡಲೇ ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು.ಆಗ ಶಾಸಕರು ತಕ್ಷಣವೇ ಅಬಕಾರಿ ಇಲಾಖೆಯ ಅಧಿಕಾರಿಗೆ ಕೆರೆ ಮಾಡಿ, ತಾಲೂಕಿನಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ.ಯಾವುದೇ ಕಾರಣಕ್ಕೂ ಅಕ್ರಮವಾಗಿ ಮದ್ಯ ಮಾರಾಟವಾಗಬಾರದು.ಇದಕ್ಕೆ ಸ್ಥಳೀಯ ಪೆÇಲೀಸರು ಸಹಕಾರದೊಂದಿಗೆ ನೀವು ಕಾರ್ಯಪ್ರವೃತ್ತರಾಗಿ ಅದಕ್ಕೆ ಕಡಿವಾಣ ಹಾಕಲೇಬೇಕು ಇಲ್ಲವಾದರೆ ನಾನು ಅಧಿವೇಶನದಲ್ಲಿ ಚರ್ಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಮದ್ಯ ಜಪ್ತಿ
ಅಫಜಲಪುರ ತಾಲೂಕಿನ ಗೌರ(ಬಿ) ಅಕ್ರಮವಾಗಿ ಮದ್ಯ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಅಬಕಾರಿ ಅಧಿಕಾರಿಗಳಿಗೆ ಶಾಸಕ ಎಂ.ವೈ.ಪಾಟೀಲ್ ಸೂಚನೆ ನೀಡುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಬಸವರಾಜ ಗುತ್ತೇದಾರ್ ಅವರ ಮನೆಯ ಮೇಲೆ ದಾಳಿ ನಡೆಸಿ 12 ಲೀಟರ್ ಮದ್ಯ ಮತ್ತು 7 ಲೀಟರ್ ಬಿಯರ್ ಭಾರತೀಯ ತಯಾರಿಕಾ ಮದ್ಯ ದೊರೆತಿದ್ದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಅಬಕಾರಿ ನಿರೀಕ್ಷಕರು ಭೀಮಣ್ಣಾ ರಾಥೋಡ್,ಅಬಕಾರಿ ಉಪ ನಿರೀಕ್ಷಕ ಬಸವರಾಜ್ ಮಾಲಗತ್ತಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.