“ಗೌಡ್ರು ಅಂಗಡಿ ಪೂಜೆಗೆ ಆಯೇರಿ”

ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ ಊರಿನ ಸಿದ್ರಾಮಪ್ಪ ಗೌಡ್ರು ಅಂಗಡಿಯ ಪೂಜೆ ಎಂದರೆ ಒಂದು ವಿಶೇಷವೇ ಸರಿ, ಇಡೀ ಊರಿನಲ್ಲಿ ಅದ್ಧೂರಿಯಾಗಿ ಪೂಜೆ ಮಾಡಿಸುವವರಲ್ಲಿ ಇವರೊ ಬ್ಬರು. ಮೂರುವರೆ ದಶಕದ ಹಿಂದಿನ ಸ್ಮರಣೆಯನ್ನು ಮಕ್ಕಳ ಮುಂದಿಡಲು ಒಂದು ಕಾರಣವೂ ಇದೆ.
ಮಹಾಮಾರಿ ಕೋವಿಡ್-೧೯ ಸೋಂಕಿನ ಭೀತಿಯಲ್ಲಿ ಮಂಕು ಬಡಿದಿರುವ ಹಬ್ಬ-ಹರಿದಿನ ಹಾಗೂ ಉತ್ಸವಗಳನ್ನು ಮತ್ತಷ್ಟು ದಿನಗಳ ಕಾಲ ಕಸಿದುಕೊಳ್ಳಲಿದೆ ಎಂಬ ಅಂದಾಜು ಯಾರಿಗೂ ಇಲ್ಲ.
ಆದರೆ ಈ ಹಿಂದೆ ನಡೆಯುತ್ತಿರುವ ಹಬ್ಬದ ಉತ್ಸವಗಳು ಕಾಲ ಕಳೆದಂತೆ ಮಾರ್ಪಾಡುಗೊಳ್ಳುತ್ತ ತನ್ನ ನೈಜ ರೂಪವನ್ನು ಕಳೆದುಕೊಂಡಿರುವುದಂತೂ ಕಟು ಸತ್ಯ.
ನನ್ನ ಕಿರಿಯ ಮಗಳು ರಿಯಾ ಕೇಳಿಯೇ ಬಿಟ್ಟಳು ಅಪ್ಪಾ…. ನಿಮ್ಮ ಕಾಲದಲ್ಲಿ ದೀಪಾವಳಿ ಹೇಗೆ ಆಚರಿಸುತ್ತಿದ್ದೀರಿ ಎಂಬ ಪ್ರಶ್ನೆ? ನನ್ನನ್ನು ಸರಿಸುಮಾರು ೩೫ ವರ್ಷಗಳ ಹಿಂದಕ್ಕೆ ಕರೆದೊಯ್ಯಲು ಸಾಧ್ಯವಾಯಿತು. ನನ್ನ ಸ್ಮರಣಾ ಶಕ್ತಿಯನ್ನು ಬಿಚ್ಚಿಡಲು ಈ ಪ್ರಶ್ನೆ ಪ್ರೇರಣೆ ನೀಡಿತು.
ನಮ್ಮೂರ ಗೌಡ್ರು ಅಂಗಡಿ ಊರಿನಲ್ಲಿಯೇ ದೊಡ್ಡದು, ಈ ಅಂಗಡಿಯಿಂದಲೇ ಊರಿನ ಬಹುತೇಕ ಕುಟುಂಬಗಳಿಗೆ ದಿನಸಿ ವಸ್ತುಗಳು ಪೂರೈಕೆಯಾಗುತ್ತವೆ. ಪ್ರತಿದಿನ ಇಲ್ಲಿ ನಡೆಯುವ ವ್ಯಾಪಾರದ ಶೇ.೯೦ರಷ್ಟು ಉದ್ರಿ. ತಿಂಗಳ ಪಗಾರ ಬಂದನಂತರವೇ ಈ ಅಂಗಡಿಯ ಬಾಕಿ ಪಾವತಿಸುವುದು ವಾಡಿಕೆ.
ನಮ್ಮೂರು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದಗಣಿ. ಈ ಗ್ರಾಮದ ಪ್ರತಿ ಕುಟುಂಬದಲ್ಲಿ ಒಂದಿಬ್ಬರು ಇದೇ ಕಂಪನಿಯಲ್ಲಿ ಕಾರ್ಮಿಕರಿದ್ದಾರೆ, ಆಗಿನ ಕಾಲದಲ್ಲಿ ತಿಂಗಳ ೧೦ನೇ ತಾರೀಖಿನಂದು ಸಿಗುವ ಪಗಾರದ ಹಣವನ್ನು ಕಿರಾಣಿ ಮತ್ತು ಬಟ್ಟೆ ಅಂಗಡಿ ಸೇರಿದಂತೆ ಸರಾಯಿ ಅಂಗಡಿಗಳ ಬಾಕಿಯನ್ನು ನಿಯತ್ತಿನಿಂದ ಪಾವತಿಸುವುದನ್ನು ಯಾರೊಬ್ಬರು ಮರೆಯುತ್ತಿರಲಿಲ್ಲ. ನಂಬಿಕೆ ವಿಶ್ವಾಸಕ್ಕೆ ನಮ್ಮೂರಿನ ಅಂದಿನ ನಾಗರಿಕರು ಉದಾಹರಣೆಯಾಗಿದ್ದಾರೆ.
೧೦ನೇ ತರಗತಿಯಲ್ಲಿದ್ದಾಗ ನನ್ನ ದೊಡ್ಡಣ್ಣ ನನಗೆ ಕರೆದು, ತಾನು ಜರೂರಾಗಿ ಊರಿಗೆ ಹೋಗಬೇಕಾಗಿದೆ ಹೀಗಾಗಿ ನಿನಗೊಂದು ಕೆಲಸ ಒಪ್ಪಿಸುತ್ತೇನೆಂದು ಹೇಳಿ ನನ್ನ ಕೈಗೆ ೩೦೦ ರೂ.ಗಳನ್ನಿಟ್ಟು ಇಂದು ಸಂಜೆ ೭-೩೫ಕ್ಕೆ ನಮ್ಮೂರ ಗೌಡ್ರ ಅಂಗಡಿಯ ದೀಪಾಳಿಯ ಪೂಜೆಯಲ್ಲಿ ಭಾಗವಹಿಸಿ ಈ ಆಯರಿ ಬರೆಸು ಎಂದರು, ನಾನು ತಲೆ ಹಾಕಿದೆ. ಏನಂತ ಬರಿಸುತ್ತಿಯಾ ? ಎಂದಾಗ ಗೊತ್ತಿಲ್ಲ ಎಂದೆ. ಮುಟ್ಟಾಳ… ಮದುವೆ ಮುಂಚಿಗಳಲ್ಲಿ ಅಯೇರಿ ಬರೆಸುವುದು ಗೊತ್ತಿಲ್ಲವೇನೋ. ಮನೆಯ ಹಿರಿಯರ ಹೆಸರನ್ನು ಅವರಿಗೆ ಹೇಳಿ ಬರೆಸಬೇಕು. ಅಂದಹಾಗೆ ನನ್ನ ಹೆಸರನ್ನು ಅವರಿಗೆ ಹೇಳಿ ಈ ೩೦೦ ರೂ.ಗಳನ್ನು ಕೊಟ್ಟು ಅವರ ಖಾತೆ ಪುಸ್ತಕದಲ್ಲಿ ಬರೆದಿರುವುದನ್ನು ಖಚಿತಪಡಿಸಿಕೊಂಡು ಬರಬೇಕೆಂದು ಹೇಳಿದ ಅವರು, ಇದೇ ವಿಷಯನ್ನು ಎರಡು ಮೂರು ಸಲ ಪುನಾರಾವರ್ತಿಸಿ ನೆನಪಿನಲ್ಲಿ ಉಳಿಯುವಂತೆ ಮಾಡಿ ಕಳಿಸಿಕೊಟ್ಟರು.
ಮನೆಯಿಂದ ನೇರವಾಗಿ ಅಂಗಡಿಯ ಕಡೆಗೆ ಹೊರಟ ನಾನು, ಮಸ್ಸಿನಲ್ಲಿಯೇ ಯೋಚಿಸತೊಡಗಿದೆ, ಇದೇನಪ್ಪಾ ಪೂಜಾ ಆಯೇರಿ… ನನಗಂತೂ ಅರ್ಥನೇ ಆಗುತ್ತಿಲ್ಲ. ಮದುವೆ ಮುಂಚಿ ಶುಭಕಾರ್ಯಗಳಲ್ಲಿ ಆಯೆರಿ ಬರೆಸುವುದು ಗೊತ್ತು. ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ಬರೆಸುವುದು ನನಗಿದು ಹೊಸದು. ನಮ್ಮಣ್ಣ ಊರಿನಲ್ಲಿ ನಡೆಯುವ ಮದುವೆ ಮತ್ತು ಶುಭ ಕಾರ್ಯಗಳಲ್ಲಿ ಭಾಗವಹಿಸಿದಾಗ ೧೧-೨೧ ರೂ.ಗಳಿಗಿಂತ ಒಂದು ನಯಾಪೈಸೆ ಹೆಚ್ಚಿಗೆ ಆಯರಿ ಬರೆಸಿರುವುದಿಲ್ಲ ಆದರೇ ಈ ಗೌಡ್ರ ಅಂಗಡಿ ಪೂಜೆಗೆ ಇಷ್ಟು ಹಣ ? ಅಬ್ಬಬ್ಬಾ… ಇರಲಿ ಈ ಕುರಿತ ಅಮ್ಮನನ್ನು ಕೇಳುತ್ತೇನೆಂದು ಮನಸ್ಸಿನಲ್ಲಿಯೇ ಅಂದುಕೊಳ್ಳುವಾಗಲೆ ಗೌಡ್ರ ಅಂಗಡಿಗೆ ಸಮೀಪಿಸಿತು.
ಅಂಗಡಿಯನ್ನು ದೀಪಗಳಿಂದ ಅಲಂಕಾರಗೊಳಿಸಿ ಅತಿ ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು. ಶಾಸ್ತ್ರಿಗಳು ಪೂಜೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು, ಅಂಗಡಿಯ ಬಯಲು ಜಾಗೆಯಲ್ಲಿ ಬಹು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮೈಕ್‌ನಲ್ಲಿ ಪೂಜೆಯ ಮಂತ್ರೋಚ್ಛಾರಣೆ ನಡೆಯುವುದು ಎಲ್ಲರೂ ನಿಂತಲ್ಲಿಯೇ ಕೇಳಿಸಿಕೊಂಡರು. ಪೂಜೆ ಸಮಾಪ್ತಿಯಾದ ನಂತರ ನಮ್ಮ ಕೈಗಳಿಗೆ ಪಟಾಕಿಗಳನ್ನು ಕೊಟ್ಟು ಹಚ್ಚುವಂತೆ ಹೇಳಿದರು. ಅಲ್ಲಿ ನೆರದವರಲ್ಲಿ ಕೆಲವು ಮಕ್ಕಳು ಯುವಕರು ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದೆವು.
ಸಣ್ಣಮಕ್ಕಳಿಗೆ ಸೂರ್…ಸೂರ್ ಬತ್ತಿ ಕೊಟ್ಟಿದ್ದರು. ಸರಿಸುಮಾರು ಒಂದು ತಾಸುಗಳ ಕಾಲ ನಡೆದ ಪಟಾಕಿಗಳ ಅರ್ಭಟ ತಣ್ಣಗಾದನಂತರ ಪಾಳೆಯ ಪ್ರಕಾರ ಅಕ್ಷತೆಯೊಂದಿಗೆ ಅಂಗಡಿಯೊಳಗೆ ಹೋಗಿ ಅಲ್ಲಿಟ್ಟಿದ್ದ ಶ್ರೀಲಕ್ಷ್ಮೀದೇವಿಯ ಫೋಟೋಗೆ ಅಕ್ಷತೆಯನ್ನು ಹಾಕಿದವರೆಲ್ಲರೂ ಶಾಸ್ತ್ರಿಗಳು ನೀಡುವ ಪ್ರಸಾದವನ್ನು ಸ್ವೀಕರಿಸುತಿದ್ದರು.
ಇಲ್ಲಿಂದ ಸ್ವಲ್ಪದೂರದಲ್ಲಿ ಕುಳಿತುಕೊಂಡಿದ್ದ ಮುನ್ಶಿ ಅಂಗಡಿ ಗುಮಾಸ್ತ ಸಾಹೇಬರು, ಹೊಸ ಖಾತೆಯ ಪುಸ್ತಕದಲ್ಲಿ ಆಯರಿಯನ್ನು ಬರೆದುಕೊಳ್ಳುತ್ತಿದ್ದ. ಅಂಗಡಿ ಮಾಲೀಕರಾದ ಸಿದ್ದರಾಮಪ್ಪಗೌಡ್ರು ಎಲ್ಲರನ್ನು ಕೈಮುಗಿದು ಗೌರವಯುತವಾಗಿ ಸ್ವಾಗತಿಸಿ ಪ್ರತ್ಯೇಕವಾಗಿ ಸಿದ್ದಪಡಿಸಿಟ್ಟಿದ್ದ ಪ್ರಸಾದದ (ಬೊಂದಿಲಡ್ಡು ಮತ್ತು ಚುಡುವ)ಪಾಕೇಟುಗಳನ್ನು ನೀಡುತ್ತಿದ್ದರು. ಹಾಗೆಯೇ ಮನೆಯ ಮುಖ್ಯಸ್ಥರ ಕುರಿತು ವಿಚಾರಿಸುತ್ತಿದ್ದರು, ಅದರಂತೆ ನನಗೂ ಏಕಪ್ಪಾ ನಿಮ್ಮಣ್ಣ ಬಂದಿಲ್ಲ ? … ಎಂದು ನನ್ನ ಹೆಗಲ ಮೇಲೆ ಕೈಹಾಕಿ ಇದೋ ಎರಡು ಪ್ರಸಾದ ಪಾಕೇಟಗಳನ್ನು ನನ್ನ ಕೈಗಿಟ್ಟು ಬೆನ್ನು ತಟ್ಟುತ್ತಾ ಅಲ್ಲಿ ಕುಳಿತಿದ್ದ ಗುಮಾಸ್ತ ನಡೆಗೆ ಕಳಿಸಿಕೊಟ್ಟರು.
ನಾನು ನನ್ನ ಕಿಸೆಯೋಳಗೆ ಕೈಹಾಕಿ ದುಡ್ಡು ತೆಗೆದು ಆ ಗುಮಾಸ್ತನ ಕೈಗಿಟ್ಟೆ . ನನ್ನನ್ನು ದಿಟ್ಟಿಸಿ ನೋಡಿದ ಗುಮಾಸ್ತ ಸಾಹೇಬರನ್ನು ಗಮನಿಸಿದ ಗೌಡ್ರು ಇವಾ ಆ ಬಾಬಣ್ಣನ ತಮ್ಮ ಎಂದೇಳಿದರು. ನಾನು ತಲೆ ಹಾಕಿದೆ. ಖಾತೆಯಲ್ಲಿ ಕನ್ನಡ ಅಕ್ಷರದಾಗ ಬಹು ಸುಂದರವಾಗಿ ದುಂಡದುಂಡನೆಯಾಗಿ ಬಾಬಣ್ಣ ಎಂದು ಬರೆದು ಅದರ ಮುಂದೆ ೩೦೦ ರೂ.ಗಳು ಎಂದು ನಮೂದಿಸಿದರು. ಜನರು ಬರೆಸುವ ಆಯರಿಯಿಂದ ಗೌಡ್ರ ಗಲ್ಲದ ಪೆಟ್ಟಿಗೆ ತುಂಬಿ ತುಳುಕಿಹೋಯಿತು. ಅದರ ಪಕ್ಕದದಲ್ಲೊಂದು ಮತ್ತೊಂದು ಗಲ್ಲದ ಪಟ್ಟಿಗೆಯನ್ನು ತಂದಿಟ್ಟಿದ್ದರು.
ಇದನ್ನೆಲ್ಲ ನೋಡಿದ ನನಗೆ ಇಷ್ಟೊಂದು ದುಡ್ಡು ಈ ಗೌಡ್ರಿಗೆ ಏಕೆ ಬರೆಸುತ್ತಿದ್ದಾರೆ ? ನಮ್ಮಣ್ಣನಿಗೂ ಇವರಹಾಗೆ ಬುದ್ದಿ ಏನಾದರೂ ಕೆಟ್ಟಿರಬೇಕೆಂದುಕೊಂಡ ನಾನು ಅಲ್ಲಿಂದ ಮನೆಗೆ ಹಿಂತಿರುಗಿದೆ ಗೌಡ್ರು ನೀಡಿದ ಪ್ರಸಾದ ಎರಡು ಪಾಕೇಟು ಹಾಗೂ ಹಣ್ಣು ತಂಬುಲ ಅಮ್ಮನ ಕೈಗಿಟ್ಟಿದ್ದೆ. ತಡ ನನ್ನ ಮನಸ್ಸಿನಲ್ಲಿ ಕಾಡುತ್ತಿದ್ದರ ಈ ಪ್ರಶ್ನೆಗಳನ್ನು ಒಂದೇ ಸೂರಿನಲ್ಲಿ ಕೇಳಿಯೇ ಬಿಟ್ಟೆ. ಆಗ ನನ್ನಮ್ಮಾ ನನ್ನಡೆ ಸಮಾಧಾನದಿಂದ ದೃಷ್ಠಿ ಹಾಯಿಸಿ ನೋಡು ಮಗು.. ಗೌಡ್ರು ಅಂಗಡಿ ಪೂಜೆಯಲ್ಲಿ ಬರೆಸಿದ ಅಯೇರಿ ವಿಷಯವಾಗಿ ವಿವರಿಸಿ ಹೇಳಿದಾಗಲೇ ನಿಜ ಸ್ಥಿತಿಯ ಅರಿವಿಗೆ ಬಂದಿದ್ದು, ಎಂದಾಗ ನನ್ನ ಮಗ ಯಾವ ವಿಷಯ ಯಾವ ಅರಿವು ? ಬಿಡಿಸಿ ಹೇಳಿ ಅಪ್ಪಾ… ಎಂದಾಗ ನೋಡು ಮಗ… ನಮ್ಮೂರು ಗೌಡ್ರು ಅಂಗಡಿಯಿಂದ ಉದ್ರಿಯಾಗಿ ನಾವು ಖರಿದಿಸುವ ದಿನಸಿ ವಸ್ತುಗಳ ಬಾಕಿ ಬಿಲ್ಲನ್ನು ದೀಪಾವಳಿಯ ಪೂಜೆಯಲ್ಲಿ ಬರೆಸುವ ಆಯೆರಿಗಳಿಂದಲೆ ಕಡಿತ ಮಾಡಿಕೊಳ್ಳುತ್ತಾರೆ.
ಹೆಚ್ಚುಕಮ್ಮಿ ಅಳಿದುಳಿದ ಹಣವನ್ನು ಮುಂದಿನ ತಿಂಗಳ ಅಂಗಡಿ ಬಾಕಿಯಲ್ಲಿ ಸರಿದೋಗಿಸುತ್ತಾರೆ ಎಂದಿದ್ದಳು ನನ್ನಮ್ಮ… ಗೊತ್ತಾ ಆಯ್ತುತಾನೆ ಎಂದಾಗ ಅವರೆಲ್ಲರ ತಲೆಗಳು ಅಲ್ಲಾಡತೊಡಗಿದವು.
ಹೌದೇನಅಪ್ಪಾ… ಉದ್ರಿ ಕೊಡುವ ನಂಬಿಕೆ ವಿಶ್ವಾಸ ಮತ್ತು ಆಯೇರಿ ಬರೆಸುವ ಸಂಪ್ರದಾಯ ಇಗಲೂ ಇದೇಯಾ ? ಎಂದ ಅವರ ಪ್ರಶ್ನೆಗೆ ಅಂದಿನ ಆ ಉತ್ಸವಗಳನ್ನು ಇಂದಿನ ಮಾಲ್ ಮಳಿಗೆಗಳು ನುಂಗಿ ಹಾಕಿವೆ. ಈಗೇನಿದ್ದರೂ ದೀಪಾವಳಿ ಹಬ್ಬದ ಡಿಸ್ಕೌಟ್‌ಗಳ ಅರ್ಭಟವೇ ಎದ್ದು ಕಾಣುತ್ತದೆ. ಅಂದಿನ ಭಕ್ತಿ ನಂಬಿಕೆಯ ಉತ್ಸಹಗಳ ನೈಜತೆ ಇಂದಿನ ತಂತ್ರಜ್ಞಾನಗಳು ಮರೆಮಾಡಿವೆ. ಈ ಕೊರೊನಾ ಮಹಾಮಾರಿಯಂತೂ ನಮ್ಮ ಹಬ್ಬಹರಿದಿನಳ ಉತ್ಸವನ್ನು ನುಂಗಿಹಾಕಿಬಿಟ್ಟಿದೆ ಎಂದಾಗ ಎಲ್ಲರೂ ಹೌದೌದು ಅಪ್ಪಾ ಎಂದು ಧ್ವನಿಗೂಡಿಸಿದಾಗ ನನ್ನ ಧರ್ಮಪತ್ನಿ ಅಡುಗೆ ಮನೆಯಿಂದಲೇ ಸ್ವಲ್ಪಕಾಯಿರಿ ಹಿನ್ನೇನೋ ಐದತ್ತು ನಿಮಿಷದೊಳಗೆ ಹಬ್ಬದ ವಿಶೇಷ ಅಡಿಗೆ ನಿಮ್ಮ ತಟ್ಟೆಯಲ್ಲಿರುತ್ತದೆ ಎಂದಳು..

  • ಹಟ್ಟಿ ನಜೀರ್‍ಮಿಯಾನ್ ಕಲಬುರಗಿ.