ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ವಕ್ಫ್ ಕಚೇರಿ ಮುಂದೆ ಕಮ್ಯುನಿಸ್ಟ್‍ರಿಂದ ಪ್ರತಿಭಟನೆ

ಕಲಬುರಗಿ.ಜ.19:ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಳವಾರ ಭಾರತ ಕಮ್ಯುನಿಸ್ಟ್ (ಮಾರ್ಕ್‍ಸಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ವಕ್ಫ್ ಕಚೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ವಕ್ಫ್ ಇಲಾಖೆಯ ವ್ಯವಸ್ಥಾಪಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಗೋಹತ್ಯೆ ನಿಷೇಧ ಕಾಯ್ದೆಯು ಮೂಲಭೂತವಾಗಿ ಕಾರ್ಮಿಕ ವಿರೋಧಿಯಾಗಿದೆ. ಹಿಂದೂ ಮುಸ್ಲಿಂ ಮತ್ತು ಹಿಂದೂ ಪರಿಶಿಷ್ಟರ ಸಂಘರ್ಷವನ್ನು ಯೋಜಿಸಲಾಗಿದೆ ಎಂದು ದೂರಿದರು.
ಕರ್ನಾಟಕ ವಕ್ಫ್ ಆಸ್ತಿ ಹಗರಣ ಪ್ರಕರಣಗಳಲ್ಲಿ ಸಿಬಿಐ ವಿಚಾರಣೆ, ಕರ್ನಾಟಕ ವಕ್ಫ್ ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯ ಸ್ಥಾಪಿಸುವಂತೆ, ಕರ್ನಾಟಕ ವಕ್ಫ್ ಭ್ರಷ್ಟ ಉದ್ಯೋಗಿಯನ್ನು ಹಿಡಿಯಲು ಕಾರ್ಯಪಡೆ ತಂಡವನ್ನು ನಿಯೋಜಿಸುವಂತೆ ಹಾಗೂ ಕರ್ನಾಟಕ ವಕ್ಫ್‍ಗೆ ಮುಸ್ಲಿಂ ಸ್ಮಶಾನಕ್ಕೆ ನಗರದ ಸಮೀಪ ಭೂಮಿ ಮಂಜೂರು ಮಾಡುವಂತೆ, ಕರ್ನಾಟಕ ವಕ್ಫ್‍ಗೆ ಲಕ್ಷ ರೂ.ಗಳನ್ನು ನಗರ ಮತ್ತು ಗ್ರಾಮೀಣ ಮಸಿದಿ, ಮದರಸಾ, ದರ್ಗಾಕ್ಕೆ ಕೊಡುವಂತೆ ಅವರು ಒತ್ತಾಯಿಸಿದರು.
ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಕಾಮಟಕಾ ವಕ್ಫ್ ನಿಧಿ ಯೋಜನೆಯನ್ನು ಪಡೆಯುವ ಸಮಯದಲ್ಲಿ ದಸ್ತಾವೇಜುಗಳ ಪ್ರಕ್ರಿಯೆಯನ್ನು ಮದರಸಾ ಮತ್ತು ಮಸೀದೆಗಳಿಗೆ ಸುಲಭಗೊಳಿಸುವಂತೆ, ಕರ್ನಾಟಕ ವಕ್ಫ್ ಆಸ್ತಿಯಿಂದ ಸರ್ಕಾರಕ್ಕೆ ಬರುವ ಆದಾಯದ ಕುರಿತು ಶ್ವೇತಪತ್ರ ಹೊರಡಿಸುವಂತೆ, ಹೈದ್ರಾಬಾದ್ ಕರ್ನಾಟಕದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಅವರು ಆಗ್ರಹಿಸಿದರು.
2007ರ ಬಿಜೆಪಿ ಸರ್ಕಾರವು ನೀಡಿದ ಭರವಸೆಯಂತೆ ಇಮಾಮ್ ಮತ್ತು ಮೌಜಾನ್ ಮನೆಗಳನ್ನು ಮಂಜೂರು ಮಾಡುವಂತೆ, ಮಾಸಿಕ ಗೌರವಧನವನ್ನು ಮೌಜಾನ್‍ರಿಗೆ 1000ರೂ.ಗಳಿಗೆ ಹಾಗೂ ಇಮಾಮ್‍ರಿಗೆ 15000ರೂ.ಗಳಿಗೆ ಹೆಚ್ಚಿಸುವಂತೆ, ಕರ್ನಾಟಕ ವಕ್ಫ್ ಮಸೀದೆಗೆ ಯಾವುದೇ ಗಳಿಕೆಯ ಆವರಣವಿಲ್ಲದ ಇಮಾಮ್ ಮತು ಮೌಜಾನ್‍ರಿಗೆ ಮಾಸಿಕ ವೇತನ ಕೊಡುವಂತೆ, ಬಿಪಿಎಲ್ ಹೊಂದಿರುವ ಮುಸ್ಲಿಂರಿಗೆ ಶಾಲಾ, ಕಾಲೇಜುಗಳನ್ನು ಆರಂಭಿಸುವಂತೆ, ವೈದ್ಯಕೀಯ ಕೇಂದ್ರಗಳ ಸೌಲಭ್ಯಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.
ಬಡ ಮುಸ್ಲಿಂ ವ್ಯಾಪಾರಿಗಳಿಗೆ ಬಾಡಿಗೆ ನೀಡಲು ಕರ್ನಾಟಕ ವಕ್ಫ್ ಒಂದು ಪ್ರಮುಖ ಸ್ಥಳದಲ್ಲಿ ವಾಣಿಜ್ಯ ವ್ಯಾಪಾರ ಸಂಕೀರ್ಣವನ್ನು ನಿರ್ಮಿಸುವಂತೆ, ಬಿಪಿಎಲ್ ಕಾರ್ಡ್ ಹೊಂದಿರುವ ಮುಸ್ಲಿಂರಿಗೆ ವಕ್ಫ್ ವಸತಿ ತಾಣಗಳನ್ನು ಮಂಜೂರು ಮಾಡುವಂತೆ, ಬಾಡಿಗೆಗೆ ನೀಡಲು ಅಪಾರ್ಟ್‍ಮೆಂಟ್ ಸಹ ನಿರ್ಮಿಸುವಂತೆ, ವಿದ್ಯಾರ್ಥಿಗಳ ವೇತನವನ್ನು 10,000ರೂ.ಗಳಿಗೆ ಹೆಚ್ಚಿಸುವಂತೆ, ಅನಾಥರಿಗೆ ಆಶ್ರಯ ಮನೆಗಳನ್ನು ಒದಗಿಸುವಂತೆ ಅವರು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಕಠಾರೆ, ಶ್ರೀಮಂತ್ ಬಿರಾದಾರ್ ಮುಂತಾದವರು ಪಾಲ್ಗೊಂಡಿದ್ದರು.