ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಹಿಂದೆ ಸಂಘ ಪರಿವಾರದ ಷಡ್ಯಂತ್ರ: ಮಾವಳ್ಳಿ ಶಂಕರ ಆರೋಪ

ಕಲಬುರಗಿ.ಜ.9: ರಾಜ್ಯ ಬಿಜೆಪಿ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನಿನ ಹಿಂದೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಸಂಘ ಪರಿವಾರದವರ ಷಡ್ಯಂತ್ರವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಇಲ್ಲಿ ಗಂಭೀರ ಆರೋಪ ಮಾಡಿದರು.
ಶನಿವಾರ ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕಾನೂನು ವಿರೋಧಿಸಿ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು ಎಂದರು.
ಮಾಂಸಾಹಾರವು ದೇಶದ ಬಹುಜನರ ಆಹಾರವಾಘಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವುದು ಮತ್ತು ಗೋಶಾಲೆಗಳನ್ನು ತೆರೆಯುವ ಮೂಲಕ ಸಂಘ ಪರಿವಾರವು ಕಾಯ್ದೆಯನ್ನೇ ಒಂದು ರೀತಿಯಲ್ಲಿ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋಮಾಂಸ ರಫ್ತಿನಲ್ಲಿ ಈಗಾಗಲೇ ಬಿಜೆಪಿಯವರು ಮತ್ತು ಸಂಘ ಪರಿವಾರದವರೇ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಿದ ಅವರು, ಗೋಹತ್ಯೆ ನಿಷೇಧ ಕಾನೂನಿನ ಮೂಲಕ ತಮ್ಮ ಬಂಡವಾಳಶಾಹಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಮಹಾಮಾರಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳಾದ ಕೃಷಿ, ವಿದ್ಯುತ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತಂದಿದ್ದು ಖಂಡನಾರ್ಹ ಎಂದು ಅವರು ಆಕ್ಷೇಪಿಸಿದರು.
ದೇಶದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚುತ್ತಿವೆ. ಪರಿಶಿಷ್ಟರ ಕೊಲೆಗಳು ಆಗುತ್ತಿವೆ. ಅಂತಹುಗಳನ್ನು ತಡೆಯಲು ಕೇಂದ್ರ ಸರ್ಕಾರವು ಕಾನೂನು ಜಾರಿಗೆ ತರದೇ ಇಂತಹ ಜನವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳು ಇಡೀ ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರವು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 26ರಂದು ಬೆಂಗಳೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗಣ್ಣ ಬಡಿಗೇರ್, ಅರ್ಜುನ್ ಗೊಬ್ಬೂರ್, ರಾಮಣ್ಣ ಕಲ್ಲದೇವನಹಳ್ಳಿ, ದೇವಿಂದ್ರ ಉಪಳಾಂವ್, ಶ್ರೀನಿವಾಸ್ ಖೇಳಗಿ ಮುಂತಾದವರು ಉಪಸ್ಥಿತರಿದ್ದರು.