ಗೋಹತ್ಯೆ ನಿಷೇಧ ಕಾಯ್ದೆ ಕಠಿಣ ಜಾರಿ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು ಡಿ,29-: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಠಿಣವಾಗಿ ಜಾರಿಗೆ ತರಲು ಇಲಾಖೆಯಿಂದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ‌ಹೇಳಿದ್ದಾರೆ.

ರಾಜ್ಯಪಾಲರಿಂದ ಅಂಕಿತವಾದ ತಕ್ಷಣ ಇಲಾಖೆ ತೀವ್ರಗತಿಯಲ್ಲಿ ಗೋವು ಸಂರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜನಿಸುತ್ತಿರುವ ವಿದೇಶಿ ತಳಿಯ ಗಂಡು ಕರುಗಳನ್ನು ಕಟುಕರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಕಾಯ್ದೆಯ ಪ್ರಕಾರ ಇದು ಶಿಕ್ಷಾರ್ಹ. ಪಶುಪಾಲಕರು ಗಂಡು ಕರುಗಳನ್ನು ಕನಿಷ್ಠ 6 ತಿಂಗಳವರೆಗೆ ತಾಯಿಯೊಂದಿಗೆ ಸಾಕಿ ನಂತರ ಕರುವನ್ನು ಗೋಶಾಲೆಗೆ ನೀಡಿ ಎಂದು ಪಶುಪಾಲಕರಲ್ಲಿ ಮನವಿ ಮಾಡಿದ್ದಾರೆ

ರೈತರಲ್ಲಿ, ಪಶುಪಾಲಕರಲ್ಲಿ ವಯಸ್ಸಾದ ಗೋವುಗಳಿದ್ದರೆ ಅವುಗಳನ್ನು ವಧೆಗಾಗಿ ಕಟುಕರಿಗೆ ನೀಡದೆ ಹತ್ತಿರದ ಗೋಶಾಲೆಗೆ ನೀಡಬಹುದು. ನಿರುಪಯುಕ್ತವೆಂದ ರಸ್ತೆಗೆ ಬಿಡುವುದನ್ನು ವಧೆಗೆ ನೀಡುವುದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರಲ್ಲಿ ಮನವಿ

ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳಲ್ಲಿ 75 ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ ಸಾಮರ್ಥ್ಯೆ ಹೆಚ್ಚಿಸಲು ಎಲ್ಲ ಗೋಶಾಲಗೆಳಿಗೆ ತಿಳಿಸಲಾಗಿದೆ.

ಅಧಿಕಾರಿಗಳಿಗೆ ಎಚ್ಚರಿಕೆ

ರಾಜ್ಯದಲ್ಲಿ ಬೀಡಾಡಿ ದನಗಳ ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಂತಹ ದನಗಳನ್ನು ತಕ್ಷಣದಲ್ಲಿ ಹತ್ತಿರದ ಗೋಶಾಲೆಗಳಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಹೊಸದಾಗಿ ಗೋಶಾಲೆಗಳನ್ನು ತೆರೆದು ಮೇವು, ನೀರು, ಚಿಕಿತ್ಸೆ ಹಾಗೂ ಬೀಡಾಡಿ ದನಗಳ ನಿರ್ವಹಣೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು

ರಸ್ತೆಯಲ್ಲಿ ಬೀಡಾಡಿ ಜಾನುವಾರು ಕಂಡುಬಂದಲ್ಲಿ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರ ಮೂಲಕ ಎಲ್ಲ ಹಂತದ ಅಧಿಕಾರಿಗಳಿಗೆರ್ ಸೂಚನೆ ರವಾನಿಸಲು ಹಾಗೂ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು

ರಾಜಕೀಯ ನಾಟಕ

ಸುಗ್ರೀವಾಜ್ಞೆ ಜಾರಿಗೆ ತರುತ್ತಿದ್ದೇವೆ ಎಂದು ತಿಳಿದ ತಕ್ಷಣವೇ ಕಲವು ರಾಜಕೀಯ ನಾಟಕಗಳು ಶುರುವಾಗಿವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ

ಹಿಂದೂ ಧರ್ಮದಲ್ಲಿ ಗೋವಿಗೆ ಶ್ರೇಷ್ಠವಾದ ಸ್ಥಾನವಿದೆ. ದೇವರ ಸಮಾನವಾಗಿ ತಾಯಿಯ ಸಮಾನವಾಗಿ ಗೋವನ್ನು ಪೂಜಿಸುತ್ತೇವೆ. ಎಲ್ಲ ಶುಭ ಸಂದರ್ಭದಲ್ಲಿ ಗೋವನ್ನು ಪೂಜಿಸುತ್ತೇವೆ, ಗೃಹ ಪ್ರವೇಶ, ಮನೆ ಶುದ್ಧಿಗೆ ಗೋವನ್ನು ಹಾಗೂ ಅದರ ಉತ್ಪನ್ನಗಳನ್ನು ಬಳಸುತ್ತೇವೆ. ಪಂಚಗವ್ಯವನ್ನು ಕೀಟ ನಾಶಕವಗಿ ಸಹ ಬಳಕೆ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನು ತಿಳಿದು ರಾಜಕೀಯ ಕಾರಣಕ್ಕಾಗಿ ಗೋವುಗಳನ್ನು ಕಡೆಗಣಿಸಿ ವಿರೋಧಿಸುತ್ತಿರುವುದು ವಿರೋಧ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ.

ಆಹಾರದ ಹಕ್ಕು ಕಸಿಯುತ್ತಿಲ್ಲ

ಮಾಂಸ ತಿನ್ನುವವರ ಹಕ್ಕನ್ನು ಈ ಕಾಯ್ದೆಯ ಮೂಲಕ ಮೊಟಕು ಗೊಳಿಸುತ್ತಿಲ್ಲ. ಈ ಮಸೂದೆಯಲ್ಲೇ ತಿಳಿಸಿದಂತೆ ೧೩ ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಕೈಬಿಡಲಾಗಿರುವುದರಿಂದ ಆಹಾರದ ಹಕ್ಕನ್ನು ಈ ಕಾಯ್ದೆ ಕಸಿಯುತ್ತಿದೆ ಎಂಬ ಹೇಳಿಕೆಗಳು ನಿರಾಧಾರ ಎಂದು ಸಚಿವರು ಸ್ಪಷ್ಟಪಡಿಸಿದರು

ಈ ಹಿಂದೆ ಇದೇ ಮಸೂದೆಯನ್ನು ಮಂಡಿಸಿದಾಗ ಎಮ್ಮೆ ಮತ್ತು ಕೋಣಗಳನ್ನು ಕೈಬಿಟ್ಟರೆ ಅಂಗೀಕರಿಸಬಹುದು ಎಂದು ಕಾಂಗ್ರೆಸ್ ೨೦೧೦ರ ಅವಧಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ಅಂಶಗಳು ಈಗಿನ ಮಸೂದೆಯಲ್ಲಿ ಪರಿಗಣನೆಗೆ ತೆಗೆದುಕೊಂಡರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ನ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.