ಗೋಹತ್ಯೆ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಜ.5-ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ- 2020ಕ್ಕೆ ರಾಜ್ಯಪಾಲ ವಜೂಬಾಯಿ ವಾಲಾ ಇಂದು ಅಂಕಿತ ಹಾಕಿದ್ದಾರೆ.

ಈ ಕಾಯ್ದೆಯಡಿ ನಿಯಮ ಉಲ್ಲಂಘಿಸಿದರೆ 3 ವರ್ಷದಿಂದ 7 ವರ್ಷ ಜೈಲು , 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಜಾನುವಾರು ಹತ್ಯೆ ಮತ್ತು ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶಕ್ಕೆ ಸಮ್ಮತಿ ನೀಡಿರುವುದನ್ನು ರಾಜ್ಯ ಸರ್ಕಾರ ತನ್ನ ರಾಜ್ಯಪತ್ರದಲ್ಲಿ ಇಂದು ಪ್ರಕಟಿಸಿದೆ.

ಇದರಿಂದಾಗಿ ರಾಜ್ಯದಲ್ಲಿ ಗೋವುಗಳ ಹತ್ಯೆಗಳ ಸಾಗಾಟಕ್ಕಾಗಿ ಸಂಪೂರ್ಣ ನಿಷೇಧಿಸಲಾಗಿದೆ.

ಕಳೆದ ಬಾರಿಯ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ದೊರಕಿತ್ತು. ಆದರೆ, ವಿಧಾನಪರಿಷತ್ ನಲ್ಲಿ ಒಪ್ಪಿಗೆ ದೊರೆತಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದ್ಯಾದೇಶದ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ಜಾನುವಾರು, ವಾಹನ ಸೇರಿದಂತೆ ಇತರೆ ವಶಪಡಿಸಿಕೊಂಡ ಸಾಮಗ್ರಿಗಳನ್ನು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನೀಡಿಲಾಗಿದೆ.

ಹತ್ಯೆಗಾಗಿ ಸಾಗಾಟ ಮಾಡುವ ಜಾನುವಾರುಗಳ ಸಂರಕ್ಷಣೆ ಮತ್ತು ಈ ಸಂಬಂಧದ ತನಿಖೆಗಾಗಿ ಸಬ್ ಇನ್ಸ್ ಪೆಕ್ಟರ್ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್ ಅಧಿಕಾರಿ ಅಥವಾ ಸಕ್ಷಮ ಅಧಿಕಾರಿಯನ್ನು ನೇಮಕ ಮಾಡಲು ಕೂಡ ಅನುಮತಿ ನೀಡಲಾಗಿದೆ.