ಗೋಹತ್ಯೆ ನಿಷೇಧಿಸಿ ಸುಗ್ರೀವಾಜ್ಞೆ

ಬೆಂಗಳೂರು, ಡಿ. ೨೮- ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಬಗ್ಗೆ ಹಾಗೂ ಮುಂದಿನ ತಿಂಗಳು ೧೮ ರಿಂದ ವಿಧಾನಸಭೆಯ ಜಂಟಿ ಅಧಿವೇಶನ ಕರೆಯಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು, ನಾಳೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುತ್ತದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸುವ ಸಂಬಂಧ ವಿಧಾನಸಭೆಯಲ್ಲಿ ಕಾಯ್ದೆ ಅಂಗೀಕಾರವಾಗಿದ್ದರೂ ವಿಧಾನಪರಿಷತ್‌ನಲ್ಲಿ ಕಾಯ್ದೆ ಮಂಡನೆಯಾಗಿರಲಿಲ್ಲ. ಹಾಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ತೀರ್ಮಾನವನ್ನು ಇಂದಿನ ಸಂಪುಟ ಸಭೆ ಕೈಗೊಳ್ಳಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಗೋಹತ್ಯೆ ನಿಷೇಧ ಸಂಬಂಧ ಹೊಸ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿಲ್ಲ. ೧೯೬೪ ರಿಂದಲೇ ಕಾಯ್ದೆ ಇತ್ತು. ಅದರಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಹಸುಗಳ ವಧೆಯನ್ನು ನಿಷೇಧಿಸಲಾಗಿದೆ. ಆದರೆ ೧೩ ವರ್ಷ ಮೀರಿದ ಎಮ್ಮೆಗಳ ವಧೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಮಾಂಸ ಗೋಮಾಂಸ ಮಾರಾಟ ನಿಷೇಧಿಸಲಾಗಿದೆ. ಕಸಾಯಿ ಖಾನೆಗಳು ಬಂದ್ ಆಗಲಿವೆ ಎಂಬುದೆಲ್ಲಾ ಸರಿಯಲ್ಲ. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಇಷ್ಟೊಂದು ವಾಖ್ಯಾನಗಳ ಅಗತ್ಯವೇ ಇರಲಿಲ್ಲ ಎಂದು ಅವರು ಹೇಳಿದರು.
೧೯೪೭ರ ಕಾನ್ಸಿಟಿಯೆಂಟ್ ಅಸ್ಲೆಂಬಿಯಲ್ಲೇ ಈ ಬಗ್ಗೆ ಚರ್ಚೆಯಾಗಿತ್ತು. ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಗೋಹತ್ಯೆ ನಿಷೇಧದ ಪರವಾಗಿದ್ದರು. ಗೋಹತ್ಯೆ ನಿಷೇಧ ಕಾಯ್ದೆ ೧೯೬೪ ರಲ್ಲೇ ಆಗಿದೆ. ಇದನ್ನು ಇದುವರೆಗೂ ಯಾರೂ ರದ್ದು ಮಾಡಿಲ್ಲ. ನಾವು ಅದಕ್ಕೆ ಸ್ವಲ್ಪ ಬಲ ತುಂಬಿದ್ದೇವೆ ಅಷ್ಟೆ ಎಂದರು.
ಜನವರಿಯಲ್ಲಿ ಅಧಿವೇಶನ
ವಿಧಾನಮಂಡಲದ ಜಂಟಿ ಅಧಿವೇಶನವನ್ನ ಜನವರಿಯಲ್ಲಿ ನಡೆಸಲು ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಬಹುಶಃ ಜ. ೧೮ ರಿಂದ ಅಧಿವೇಶನ ಆರಂಭವಾಗಬಹುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕದ ನಿಗದಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಎಪಿಎಂಸಿ ಸೆಸ್ ಇಳಿಕೆ
ರಾಜ್ಯದ್ ಎಪಿಎಂಸಿ ಸೆಸ್‌ನ್ನು ೧ ರೂ.ಗಳಿಂದ ೬೦ ಪೈಸೆಗೆ ಇಳಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಆದರೆ ಎಪಿಎಂಸಿಯಿಂದ ಹೊರಗೆ ಸೆಸ್ ವಿಧಿಸಲು ಅವಕಾಶ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈ ಮೊದಲು ಎಪಿಎಂಸಿಗಳಲ್ಲಿ ಶೇ. ೨ ರಷ್ಟು ಸೆಸ್ ವಿಧಿಸಲಾಗುತ್ತಿತ್ತು. ಇದರಲ್ಲಿ ಶೇ. ೧ ರಷ್ಟು ವರ್ತಕರಿಗೆ ಮತ್ತೇ ೧ ರಷ್ಟು ಎಪಿಎಂಸಿಗೆ ಸೆಸ್ ಹಂಚಿಕೆಯಾಗುತ್ತಿತ್ತು. ವರ್ತಕರ ಬೇಡಿಕೆ ಮೇರೆಗೆ ಎಪಿಎಂಸಿಗೆ ೬೦ ಪೈಸೆ ಸೆಸ್ ಹಂಚಿಕೆ ಮಾಡಲು ಮತ್ತು ಉಳಿದ ೧.೪೦ ರಷ್ಟು ಸೆಸ್‌ನ್ನು ವರ್ತಕರಿಗೆ ನೀಡಲು ಸಂಪುಟ ಅನುಮೋದನೆ ನೀಡಿದೆ ಎಂದರು.
ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ
ಎಟಿಎಂಗಳಿಗೆ ಹಣ ಪೂರೈಸುವ ವಾಹನಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಜಾರಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಹೊತ್ತಿನವರೆಗೆ ಎಟಿಎಂಗಳಿಗೆ ಹಣ ಪೂರೈಸಬೇಕು. ಯಾವ ರೀತಿ ಹಣ ಸಾಗಿಸಬೇಕು ಎಷ್ಟು ಮಂದಿ ಭದ್ರತಾ ಸಿಬ್ಬಂದಿಗಳಿರಬೇಕು ಎಲ್ಲದಕ್ಕೂ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ನೀರಾವರಿ ಯೋಜನೆಗೆ ಒಪ್ಪಿಗೆ
ಯಗಚಿ ನದಿಯಿಂದ ಹಾಸನ ಜಿಲ್ಲೆಯ ೧೨ ಕೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ೪ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗ ಸಚಿವ ಸಂಪುಟ ಸಭೆ ಈ ಯೋಜನೆಗೆ ಅನುಮೋದನೆ ನೀಡಿದೆ ಎಂದರು.
ಸುಮಾರು ೧೨೪ ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ಬೇಲೂರಿನಲ್ಲಿ ಪಾದಯಾತ್ರೆ ಹೋರಾಟ ನಡೆಸಿದ್ದರು. ಆದರೆ ಹಿಂದಿನ ಸರ್ಕಾರಗಳು ಈ ಯೋಜನೆ ಜಾರಿಗೆ ಗಮನ ಹರಿಸಿರಲಿಲ್ಲ. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಯೋಜನೆ ಜಾರಿಗೆ ಒಪ್ಪಿಗೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಐಪಿಎಸ್ ಅಧಿಕಾರಿಗಳ ಜಟಾಪಟಿ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಲಿಲ್ಲ. ಈ ಸಂಬಂಧ ಗೃಹ ಸಚಿವರು ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿದ್ದಾರೆ. ವರದಿ ಬರದೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವುದು ಸರಿ ಹೋಗುವುದಿಲ್ಲ ಎಂಬ ಕಾರಣಕ್ಕೆ ಚರ್ಚೆ ನಡೆಯಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿರುವ ತೋಟಗಾರಿಕೆ ಇಲಾಖೆಯ ಆಸ್ತಿಗಳ ನಿರ್ವಹಣೆಯನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹಾಗೆಯೇ ಕೆಮ್ಮಣ್ಣು ಗುಂಡಿಯ ತೋಟಗಾರಿಕೆ ಇಲಾಖೆಯ ಆಸ್ತಿಗಳನ್ನು ಜಂಗಲ್ ಲಾಡ್ಜಸ್‌ಗೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯದ ತಿದ್ದುಪಡಿ ಕಾಯ್ದೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.