ಗೋಹತ್ಯೆ ತಡೆಗೆ ಶಾಸಕರ ಪ್ರಯತ್ನ ವಾಗ್ವಾದ, ಇಬ್ಬರ ವಿರುದ್ಧ ಪ್ರಕರಣ

ಬಸವಕಲ್ಯಾಣ:ಜು.3: ನಗರದ ಹಿರೇಮಠ ಓಣಿಯಲ್ಲಿನ ಮನೆಯೊಂದರಲ್ಲಿ ಶನಿವಾರ ಗೋಹತ್ಯೆ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಸ್ಥಳೀಯ ಶಾಸಕ ಶರಣು ಸಲಗರ ಅಲ್ಲಿಗೆ ತೆರಳಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಗೋವು ಕಡಿಯಲಾಗಿತ್ತು ಎಂದು ಗೊತ್ತಾಗಿದೆ.

ಈ ವೇಳೆ ಇನಾಮುಲ್ಲಾ ಖಾನ್, ಮಜರ್ ಖಾನ್ ಎಂಬುವರೊಂದಿಗೆ ಸಲಗರ ನಡುವೆ ವಾಗ್ವಾದ ನಡೆದಿದೆ.

‘ಗೋಹತ್ಯೆ ಕಾನೂನು ಬಾಹಿರವಾಗಿದೆ. ಯಾವುದೇ ಸರ್ಕಾರ ಇದ್ದರೂ ಇದು ನಡೆಯದು’ ಎಂದು ಶರಣು ಸಲಗರ ಅಲ್ಲಿದ್ದವರಿಗೆ ಎಚ್ಚರಿಕೆ ನೀಡಿದರು.

ಅಲ್ಲಿ ನೆರೆದಿದ್ದ ಓಣಿಯ ಕೆಲ ಮಹಿಳೆಯರು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ‘ಇಂಥದೆಲ್ಲ ನಿಲ್ಲಿಸುವುದು ನನ್ನ ಜವಾಬ್ದಾರಿ. ನಾನೇ ದೂರು ನೀಡುತ್ತೇನೆ’ ಎಂದು ಶಾಸಕರು ಹೇಳಿದರು.

ಜರಂಗದಳದ ಕೆಲವರು ಜೈಶ್ರೀರಾಮ ಎಂದು ಘೋಷಣೆಗಳನ್ನು ಕೂಗಿದರು. ಡಿವೈಎಸ್‍ಪಿ ಶುದಾಂಶು ರಾಜಪೂತ ಅವರು ಪೆÇಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.

‘ಇನಾಮುಲ್ಲಾ ಎಂಬುವರ ಮನೆಯಲ್ಲಿ ಗೋವು ಕಡಿಯಲಾಗಿದೆ. ಸ್ಥಳೀಯರಿಗೆ ಗೊತ್ತಾಗಿ ಶಾಸಕರಿಗೆ ವಿಷಯ ತಿಳಿಸಿದ್ದಾರೆ. ಶಾಸಕರು ಅಲ್ಲಿಗೆ ಹೋಗಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪಶು ವೈದ್ಯಾಧಿಕಾರಿ ರವೀಂದ್ರನಾಥ ಶಿವರಾಮನೋರ ಕೊಟ್ಟ ದೂರಿನ ಮೇರೆಗೆ ಇನಾಮುಲ್ಲಾ ಖಾನ್ ಹಾಗೂ ಮಜರ್ ಖಾನ್ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲು ಹೋರಿ ಕಡಿದದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.