ಗೋಶಾಲೆಯ 21 ಆಕಳುಗಳು ನಾಪತ್ತೆ: ಪೋಲಿಸ್ ಆಯುಕ್ತರ ಕಚೇರಿಗೆ ದಲಿತ ಸೇನೆ ಮುತ್ತಿಗೆ

ಕಲಬುರಗಿ,ಜೂ.26: ಕಾಳಗಿ ತಾಲ್ಲೂಕಿನ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ್ ದೇವಾಲಯದ ಗೋಶಾಲೆಯಲ್ಲಿ ಮೊಹ್ಮದ್ ಜಾವೀದ್ ತಂದೆ ಮೊಹ್ಮದ್ ಗಫೂರ್ ಅವರಿಗೆ ಸೇರಿದ 27 ಆಕಳು ಮತ್ತು ಕರುಗಳಲ್ಲಿ ಕೇವಲ ಐದು ಜಾನುವಾರುಗಳು ಇದ್ದು, ಇನ್ನುಳಿದ 21 ಆಕಳುಗಳು ನಾಪತ್ತೆಯಾಗಿದ್ದು, ತಪ್ಪಿತಸ್ಥ ಪೋಲಿಸ್ ಅಧಿಕಾರಿ ಮತ್ತು ಸಂಬಂಧಿಸಿದ ಗೋಶಾಲೆಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ದಲಿತ ಸೇನೆ ಕಾರ್ಯಕರ್ತರು ನಗರ ಪೋಲಿಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆಕಾರರು ನಂತರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಗೋರಕ್ಷಣೆಯ ಹೆಸರಿನಲ್ಲಿ ರಾಜಕೀಯ ಪ್ರೇರಿತ ದಮನಕಾರಿ ಶಕ್ತಿಗಳಿಂದಾಗಿ ಜಿಲ್ಲೆಯ ರೈತರು, ಅಲ್ಪಸಂಖ್ಯಾತರು ಮಹಿಳೆಯರು ದುರ್ಬಲರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಮಾಪಿಯಾಗಳಿಗೆ ಮಟ್ಟ ಹಾಕಬೇಕೆಂದು ಒತ್ತಾಯಿಸಿ ಹೋರಾಟವನ್ನು ರೂಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಆಹಾರ ಧಾನ್ಯ, ಭೂಗಳ್ಳತನ ದಂಧೆಯೊಂದಿಗೆ ಈಗ ಗೋವುಗಳ ದಂಧೆಯೂ ವ್ಯಾಪಕವಾಗಿ ನಡೆಯುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಪೋಲಿಸ್ ಇಲಾಖೆಯವರೇ ಅಕ್ರಮಗಳಿಗೆ ಸಹಕರಿಸುತ್ತಿರುವ ಅನುಮಾನ ಇದ್ದು, ಆ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯಲ್ಲಿ ಜಪ್ತಿ ಮಾಡಿಕೊಂಡಿರುವ ಸಾವಿರಾರು ಆಕಳು ಮತ್ತು ಕರುಗಳು ನಾಪತ್ತೆಯಾಗಿವೆ ಎಂದು ಆರೋಪಿಸಿದರು.
ಜಪ್ತಿ ಮಾಡಿರುವ ದನಕರುಗಳು ನಾಪತ್ತೆಯ ಹಿಂದೆ ಜವಾಬ್ದಾರಿಯಿಂದ ನಡೆದುಕೊಂಡು ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಬೇಕಿದ್ದ ಪೆÇಲೀಸ್ ಇಲಾಖೆ, ಗೋ ಶಾಲೆಯ ಮುಖ್ಯಸ್ಥರು, ಪಶು ವೈದ್ಯರು ಮತ್ತು ಕಸಾಯಿ ಖಾನೆಯವರಿದ್ದಾರೆ. ಆದ್ದರಿಂದಲೇ ವಿದೇಶಕ್ಕೆ ಗೋ ಮಾಂಸ ರಪ್ತಿನಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ ಎಂದು ಅವರು ಕಿಡಿಕಾರಿದರು.
2022ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯವರು ನಗರದ ಬಿಲಾಲಾಬಾದ್ ನಗರದ ರೈತ ಮಹ್ಮದ್ ಜಾವೀದ್ ಅವರ ತೋಟದಲ್ಲಿದ್ದ 26 ಆಕಳುಗಳನ್ನು ಮತ್ತು ಕರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ, ಆದರೆ ನ್ಯಾಯಾಲಯದ ಆದೇಶ ನೀಡಿದರೂ ಇಲ್ಲಿಯವರೆಗೆ ದನಕರುಗಳನ್ನು ಬಿಡುಗಡೆ ಮಾಡಿಲ್ಲ, ಜೊತೆಗೆ ಜಪ್ತಿಮಾಡಿರುವ ದನಕರುಗಳನ್ನು ರೇವಣಸಿದ್ದೇಶ್ವರ್ ಗೋ ಶಾಲೆಯಲ್ಲಿಡಲಾಗಿದೆ ಎಂದು ಪೆÇಲೀಸರು ಪತ್ರ ಬರೆದಿದ್ದರು. ಆದಾಗ್ಯೂ, ಬಿಡುಗಡೆ ಆದೇಶ ಪತ್ರ ತಗೆದುಕೊಂಡು ಗೋ ಶಾಲೆಗೆ ಸಂಪರ್ಕಿಸಿದರೆ ಕೇವಲ 5 ಗೋವುಗಳು ಮಾತ್ರ ಜೀವಂತವಿವೆ ಎಂದು ಗೋಶಾಲೆಯವರು ಹೇಳುತ್ತಾರೆ, ಹಾಗಾದರೆ ಉಳಿದ 21 ಗೋವುಗಳು ಎಲ್ಲಿಗೆ ಹೋದವು ಎಂದು ಕೇಳಿದರೆ ಅದಿಕಾರಿಗಳಲ್ಲಿ ಉತ್ತರವಿಲ್ಲ. ಈ ಎಲ್ಲ ಮಾಪಿಯಾ ಮಾಡುವಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮತ್ತು ಗೋ ಶಾಲೆಯವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಹನುಮಂತ್ ಯಳಸಂಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಲಿಂಗಪ್ಪ ಎಸ್. ದೊಡ್ಡಮನಿ, ಮಂಜುನಾಥ್ ಎಸ್. ಭಂಡಾರಿ, ಅಶ್ರಫ್ ಅಲಿ, ಕಪಿಲ್ ವಾಲಿ, ಶಿವಕುಮಾರ್ ಗೋಳಾ, ಮಲ್ಲಿಕಾರ್ಜುನ್ ಬೋಳನಿ, ಗುರು ಮಾಳಗೆ, ಮೋಹನ್ ಚಿನ್ನಾ, ರಾಜು ಲೆಂಗಟಿ, ಮಲ್ಲೇಶಿ ಸಿ. ಯಾದವ್, ಶ್ರೀಕಾಂತ್ ರೆಡ್ಡಿ, ಚನ್ನು ನಾಯ್ಕೋಡಿ, ಪಂಚಶೀಲ್ ವಿ. ಚಾಂಬಾಳ್, ಅಸ್ಪಾಕ್ ಹುಸೇನ್, ಮಹಾಂತ್ ಬಳೂಂಡಗಿ, ಮೈಲಾರಿ ಕಾಸ್ಕರ್, ಚಂದ್ರಶಾ ಗಾಯಕವಾಡ್, ಶರಣು ಕವಲಗಾ, ಶಿವಲಿಂಗ್ ಮಾಡ್ಯಾಳಕರ್, ಹುಸೇನ್ ತಳಕೇರಿ, ಮಹೇಶ್ ಚಂದ್ರಳ್ಳಿ ಮುಂತಾದವರು ಪಾಲ್ಗೊಂಡಿದ್ದರು.