ಗೋವು ರಕ್ಷಣೆಗೆ ಶಿವರಾಜ್ ಸಿಂಗ್ ಕ್ರಮ


ಭೋಪಾಲ್, ನ ೨೨ -ಮಧ್ಯಪ್ರದೇಶದಲ್ಲಿ ಗೋವುಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತಾಗಿ ಮೊದಲ ಸಂಪುಟ ಸಭೆ ಇಂದು ನಡೆಯಿತು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಭೋಪಾಲ್ ನಿಂದ ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅಗರ್ ಮಾಲ್ವಾ ಜಿಲ್ಲೆಯ ಸಲಾರಿಯಾದಲ್ಲಿರುವ ಗೋ ಅಭಯಾರಣ್ಯದಿಂದ ವಿವಿಧ ರಾಜ್ಯಗಳ ೧೪ ತಜ್ಞರು ಈ ಸಭೆಯಲ್ಲಿ ಪಾಲ್ಗೊಂಡರು. ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಗೋ ಅಭಯಾರಣ್ಯಕ್ಕೆ ಭೇಟಿ ನೀಡಿದರು.
ಅಲ್ಲಿ ಪ್ರಮುಖ ತಜ್ಞರೊಂದಿಗೆ ಗೋವು ಸಂರಕ್ಷಣೆ ಮತ್ತು ಉತ್ತೇಜನದ ಬಗ್ಗೆ ವಿವರವಾದ ಚರ್ಚೆ ನಡೆಸಿದರು. ಕೃಷಿ, ಪಶುಸಂಗೋಪನೆ, ಅರಣ್ಯ, ಕಂದಾಯ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಗೃಹ ಇಲಾಖೆಯನ್ನು ಸಂಪುಟ ಸಭೆಯಲ್ಲಿ ಸೇರಿಸಲಾಗಿದೆ. ಮುಖ್ಯಮಂತ್ರಿಯವರು ಗೋಸಂಪುಟದ ಅಧ್ಯಕ್ಷರಾಗಿದ್ದರೆ, ಮಂತ್ರಿಗಳಾದ ಡಾ.ನಾರೋಟಮ್ ಮಿಶ್ರಾ, ಕುನ್ವರ್ ವಿಜಯ್ ಷಾ, ಕಮಲ್ ಪಟೇಲ್, ಡಾ.ಮಹೇಂದ್ರ ಸಿಂಗ್ ಸಿಸೋಡಿಯಾ ಮತ್ತು ಪ್ರೇಮ್ ಸಿಂಗ್ ಪಟೇಲ್ ಅವರು ಸದಸ್ಯರಾಗಿದ್ದಾರೆ.
ಈ ಮಧ್ಯೆ, ಇತರ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿ ಗೋ ಸಂರಕ್ಷಣೆಗಾಗಿ ’ಗೋ ಸೆಸ್ ವಿಧಿಸಲು ಸಹ ಪರಿಗಣಿಸಲಾಗುತ್ತಿದೆ. ಆದಾಯ ತೆರಿಗೆಯ ಸೆಕ್ಷನ್ ೮೦-ಜಿ ಅಡಿಯಲ್ಲಿ ಗೋವುಗಳಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ನೀಡುವ ಅವಕಾಶವಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ.ಎನ್. ಕೊನ್ಸೋಟಿಯಾ ತಿಳಿಸಿದ್ದಾರೆ. ಮತ್ತೊಂದೆಡೆ, ೧ ಲಕ್ಷ ೬೬ ಸಾವಿರ ಹಸುಗಳನ್ನು ಹೊಂದಿರುವ ೬೨೭ ಗೋಶಾಲೆಗಳನ್ನು ರಾಜ್ಯದಲ್ಲಿನ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿವೆ.