ಗೋವಿಂದ ಗಾನ ಕಾರ್ಯಕ್ರಮಕ್ಕೆ ಚಾಲನೆ, ಸಿರಿಗೋವಿಂದ ವಿಠ್ಠಲ ಪ್ರಶಸ್ತಿ ಪ್ರದಾನ

ರಾಯಚೂರು.ಜ.೦೪-ದಾಸ ಸಾಹಿತ್ಯದ ನೆಲೆಬೀಡಾಗಿರುವ ರಾಯಚೂರಿ ನಲ್ಲಿ ಬಾಳಿದ ದಾಸವರೇಣ್ಯ ನೇಕರು ರಚಿಸಿದ ಸಾಹಿತ್ಯ ವಿಶ್ವಮಟ್ಟದಲ್ಲಿ ಹೆಸರಾಗಿದೆ. ಇಂಥ ಪವಿತ್ರ ಸ್ಥಳದಲ್ಲಿ ದಾಸರ ಕೀರ್ತನೆಯ ಪ್ರಸಾರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು.
ಅವರು ನಗರದ ರಂಗಮಂದಿರದಲ್ಲಿ ಶ್ರೀ ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್ ವತಿಯಿಂದ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು.
ಸಮಾಜದ ಎಲ್ಲ ವರ್ಗದವರಿಗೆ ದಾಸ ಸಾಹಿತ್ಯವನ್ನು ಪರಿಚಯಿಸಿದ ಹೆಗ್ಗಳಿಕೆ ಅಸ್ಕಿಹಾಳ ಗೋವಿಂದ ದಾಸರದು. ಹೊಲಗದ್ದೆಗಳಲ್ಲಿ ಶ್ರಮವಹಿಸಿ ದುಡಿಯುತ್ತಲೇ ದಾಸರ ಪದಗಳನ್ನು ಹಾಡುವಂತೆ ಪ್ರೇರಣೆ ನೀಡಿದ್ದು ಗೋವಿಂದದಾಸರು ಎಂದು ಹೇಳಿದರು.
ಕೋವಿಡ್ ನಿಂದ ಜನತೆ ಎದುರಿಸುತ್ತಿರುವ ಒತ್ತಡದಿಂದ ಪಾರಾಗಲು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಪರಿಹಾರ ಸಾಧ್ಯ. ಭಗವಂತನ ಅನುಗ್ರಹದಿಂದ ಮಾತ್ರ ಲೌಕಿಕ ಜೀವನದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂ ಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆ ಮೂಲಕ ಕೋವಿಡ್ ಶಾಶ್ವತವಾಗಿ ಹೊಡೆದೋಡಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಮಾಜಿ ಎಂಎಲ್ಸಿ ಎನ್. ಎಸ್. ಬೋಸರಾಜು, ನಗರದ ಶಾಸಕ ಡಾ.ಶಿವರಾಜ್ ಪಾಟೀಲ್, ಆರ್ ಡಿ ಎ ಅಧ್ಯಕ್ಷ ವೈ. ಗೋಪಾಲರೆಡ್ಡಿ, ರವೀಂದ್ರ ಜಲ್ದಾರ್, ಟ್ರಸ್ಟ್ ಅಧ್ಯಕ್ಷ ಶೇಷಗಿರಿದಾಸ್ ರಾಯಚೂರು ಸೇರಿ ಅನೇಕರಿದ್ದರು.
ಇದೇ ವೇಳೆ ಕೊಪ್ಪಳದ ವಿದ್ವಾಂಸ ಶ್ರೀ ರಘುಪ್ರೇಮಾಚಾರ್ಯ ಅವರಿಗೆ ಸಿರಿಗೋವಿಂದ ವಿಠ್ಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಹರೀಶ್ ಮೂರ್ತಿ, ಡಾ.ವಿದ್ಯಾ ಕಸ್ಬೆ, ಪಂ.ಮುರಳೀಧರಾಚಾರ್ಯ ಗಲಗಲಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಮುರಳೀಧರ ಕುಲಕರ್ಣಿ ನಿರ್ವಹಿಸಿದರು. ಇದಕ್ಕೂ ಮೊದಲು ಪಲ್ಲವಿ ಆಶ್ರಿತ್ ಮುಜುಮದಾರ್, ವರದೇಂದ್ರ ಗಂಗಾಖೇಡ್ ಸೇರಿದಂತೆ ಅನೇಕ ಕಲಾವಿದರು ದಾಸವಾಣಿ ಪ್ರಸ್ತುತಪಡಿಸಿದರು.

ವಿವಿಧೆಢೆಯಿಂದ ಆಗಮಿಸಿದ್ದ ಜನತೆ ಪಾಲ್ಗೊಂಡಿದ್ದರು.

ರಾಯಚೂರಿನ ರಂಗಮಂದಿರ ದಲ್ಲಿ ಭಾನುವಾರ ಆಯೋಜಿಸಿದ್ದ ಗೋವಿಂದಗಾನ ಕಾರ್ಯಕ್ರಮದಲ್ಲಿ ಕೊಪ್ಪಳದ ವಿದ್ವಾಂಸರಾದ ಶ್ರೀ ರಘುಪ್ರೇಮಾಚಾರ್ಯ ಅವರಿಗೆ ಸಿರಿಗೋವಿಂದ ವಿಠ್ಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು.