ಗೋವಿಂದರಾಜ ನಗರ ಟಿಕೆಟ್ ನಾಲ್ವರ ಹೆಸರು ಶಿಫಾರಸ್ಸು

ಬೆಂಗಳೂರು,ಏ.೧೪:ವಸತಿ ಸಚಿವ ವಿ. ಸೋಮಣ್ಣ ಅವರು ವರುಣಾ ಮತ್ತು ಚಾಮರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಸೇರಿದಂತೆ ನಾಲ್ವರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಕ್ಷೆತ್ರದಿಂದ ಗೆದ್ದಿದ್ದ ಸಚಿವ ಸೋಮಣ್ಣ ಅವರ ಪುತ್ರನಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವನ್ನು ಕಾರ್ಯಕರ್ತರು ರಾಜ್ಯ ನಾಯಕರಿಗೆ ಮಾಡಿದ್ದು, ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಸೇರಿದಂತೆ ಪ್ರಮುಖ ಮುಖಂಡರುಗಳಿಗೆ ಕಾರ್ಯಕರ್ತರು ಮನವಿಪತ್ರವನ್ನು ನೀಡಿದ್ದಾರೆ.ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ವರಿಷ್ಠರು ಸಚಿವ. ವಿ.ಸೋಮಣ್ಣ ಜತೆ ಚರ್ಚಿಸಿ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದು, ಸೋಮಣ್ಣ ಅವರು ಹೇಳಿದವರಿಗೆ ಟಿಕೆಟ್ ಕೊಡುವ ಸಾಧ್ಯತೆಗಳು ಹೆಚ್ಚಿವೆ.
ಈ ಕ್ಷೇತ್ರಕ್ಕೆ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ, ಇವರ ಜತೆಗೆ ಒಕ್ಕಲಿಗ ಸಮುದಾಯದ ಗೋವಿಂದರಾಜ ನಗರ ಮಂಡಲ ಅಧ್ಯಕ್ಷ ವಿಶ್ವನಾಥ್‌ಗೌಡ, ಹಿಂದುಳಿದ ವರ್ಗದ ಮೋಹನ್‌ಕುಮಾರ್, ಮಾಜಿ ಬಿಬಿಎಂಪಿ ಸದಸ್ಯ ಉಮೇಶ್‌ಶೆಟ್ಟಿ ಇವರುಗಳ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ. ಈ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.