ಗೋವಿಂದರಾಜನಗರ ಮಾದರಿಯಲ್ಲಿ ನಗರ ಅಭಿವೃದ್ದಿ ಮಾಡುವೆ

ಚಾಮರಾಜನಗರ, ಏ.20- ಚಾಮರಾಜನಗರ ಜಿಲ್ಲಾ ಕೇಂದ್ರವನ್ನು ಬೆಂಗಳೂರಿನ ಗೋವಿಂದರಾಜನಗರ ಮಾದರಿಯಲ್ಲಿ ಅಭಿವೃದ್ದಿಸಲು ಈ ಬಾರಿ ಬಿಜೆಪಿಗೆ ಅವಕಾಶ ಮಾಡಿ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮನವಿ ಮಾಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಪಕ್ಕದ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಾಗಿ 26 ವರ್ಷ ಕಳೆದು ಸಹ ಅಭಿವೃದ್ದಿಯಾಗುತ್ತಿಲ್ಲ. 15 ವರ್ಷಗಳ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟಿದ್ದೀರಿ, ಮೂರು ಬಾರಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೀರ. ಚಾಮರಾಜನಗರ ಅಭಿವೃದ್ದಿಗಾಗಿ, ನವ ಚಾಮರಾಜನಗರ ನಿರ್ಮಾಣಕ್ಕಾಗಿ ನನಗೊಂದು ಅವಕಾಶಕೊಟ್ಟು ನೋಡಿ. ನಿಮ್ಮ ಸೋಮಣ್ಣ ಏ. 13 ರಿಂದ ನಿಮ್ಮ ಸೇವಕನಾಗಿ 24*7 ಮಾದರಿಯಲ್ಲಿ ದುಡಿಯುತ್ತೇನೆ ಎಂದು ಅಭಯ ನೀಡಿದರು.
ಚಾಮರಾಜನಗರವನ್ನು ಗೋವಿಂದರಾಜನಗರದ ಮಾದರಿಯಲ್ಲಿ ಅಭಿವೃದ್ದಿಪಡಿಸಿ ರಾಜ್ಯದ ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡುತ್ತೇನೆ. ಹದಿನೈದು ವರ್ಷಗಳ ಕಾಲ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟು ನೋಡಿದ್ದೀರಿ. ಐದು ವರ್ಷ ಬಿಜೆಪಿಗೆ ಅಧಿಕಾರ ಕೊಡಿ ಈ ನಿಮ್ಮ ಸೋಮಣ್ಣ ಯಾವ ಮಟ್ಟದ ಅಭಿವೃದ್ದಿ ಮಾಡುತ್ತೇನೆ ಎಂಬುವುದು ತೋರಿಸಿ ಕೊಡುತ್ತೇನೆ ಎಂದರು
ಅಧಿಕಾರ ನಮ್ಮಪ್ಪನ ಆಸ್ತಿಯಲ್ಲ:
ಭಗವಂತ ಕೊಟ್ಟಿರುವ ಅವಕಾಶವಾಗಿದೆ. ಶ್ರೀ ಮಲೆಮಹದೇಶ್ವರರು, ಶ್ರೀ ಚಾಮುಂಡೇಶ್ವರಿ ಅಮ್ಮನ ಅವರುಗಳೇ ನನ್ನನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಇಲ್ಲಿಯ ಕನಕಪುರ, ಎಲ್ಲಿಯಾ ಗೋವಿಂದನಗರ, ಎತ್ತನಾ ಚಾಮರಾಜನಗರ ಎಂಬಂತೆ ನನಗೂ ಚಾಮರಾಜನಗರಕ್ಕು ಅವಿನಾಭ ಸಂಬಂಧವಿದೆ. ಜಿಲ್ಲೆಯಲ್ಲಿ ನಮ್ಮ ಮನೆ ದೇವರು ಮಲೈ ಮಹದೇಶ್ವರ ನೆಲೆಸಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಗುಂಡ್ಲುಪೇಟೆಯಲ್ಲಿ ನಿರಂಜನ್, ಕೊಳ್ಳೇಗಾಲದಲ್ಲಿ ಎನ್. ಮಹೇಶ್, ಹನೂರಿನಲ್ಲಿ ಡಾ. ಪ್ರೀತನ್ ಹಾಗೂ ವರಣಾ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಸೋಮಣ್ಣ ಮನವಿ ಮಾಡಿದರು.
ನರೇಂದ್ರಮೋದಿ ಒಂದು ಸಣ್ಣ ಕುಟುಂಬದಿಂದ ದೇಶದ ಪ್ರಧಾನಿಯಾದವರು. ನನ್ನ ಉದ್ದೇಶ ಬಡವರಿಗೆ ಧ್ವನಿ ಇಲ್ಲದವರಿಗೆ ಸಮಾನತೆ ಕೊಡಬೇಕು ಉದ್ಯೋಗದಿಂದ ಹಿಡಿದು ನೆಮ್ಮದಿ ಕೊಡುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲ. ಇವೆಲ್ಲರು ಸಹ ಆಗಬೇಕಾದರೆ ನನಗೊಂದು ಅವಕಾಶ ಮಾಡಿಕೊಡಿ ಎಂದು ಸಭಿಕರಲ್ಲಿ ಕೈಮುಗಿದು ಸೋಮಣ್ಣ ಬೇಡಿದರು.
ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಹಾಗು ಚಾ.ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿ ಕೋಟೆ ಎಂ.ಶಿವಣ್ಣ ಮಾತನಾಡಿ, ನಮ್ಮ ಜನಪ್ರಿಯ ನಾಯಕರಾದ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು ಎಂಬುವುದು ಕಾರ್ಯಕರ್ತರ ಬಯಕೆಯಾಗಿದ್ದು, 20 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು, ಅಮಿತ್ ಶಾ ಅವರು ದೂರವಿಟ್ಟ ಚಾಮರಾಜನಗರ ಅಭಿವೃದ್ದಿಯಾಗಬೇಕು ಎಂಬ ದೃಷ್ಟಿಯಿಂದ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಿದ್ದಾರೆ. ಚಾಮರಾಜನಗರ ಅಭಿವೃದ್ದಿ ಸೋಮಣ್ಣ ಅವರಿಂದ ಮಾತ್ರ ಸಾಧ್ಯ ಅವರಲ್ಲಿ ಯಾವುದೇ ಜಾತಿ ಧರ್ಮ ಎನ್ನುವ ಭಾವನೆ ಇಲ್ಲ ಸರ್ವ, ಧರ್ಮದ ನಾಯಕರಾಗಿದ್ದಾರ ಎಂದರು.
ನಾಗಶ್ರೀಪ್ರತಾಪ್ ಬಗ್ಗೆ ವಿಶೇಷ ಕಾಳಜಿ ತೋರಿದ ಸೋಮಣ್ಣ ! – ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಕಿ ಪ್ರಮುಖರಾಗಿದ್ದ ಮಾಜಿ ಶಾಸಕ ದಿ. ಸಿ. ಗುರುಸ್ವಾಮಿ ಅವರು ಪುತ್ರಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾಗಶ್ರೀ ಪ್ರತಾಪ್ ಅವರ ಬಗ್ಗೆ ವೇದಿಕೆ ಹಾಗೂ ಮೆರವಣಿಗೆಯಲ್ಲಿ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿಶೇಷ ಕಾಳಜಿ ವಹಿಸಿದರು. ಇಂದು ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಸೋಮಣ್ಣ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಗಶ್ರೀ ಅವರಿಗೆ ವೇದಿಕೆಯ ದೂರದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ವಿ. ಸೋಮಣ್ಣ ತಮ್ಮ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚನೆ ನೀಡಿ, ಅಲ್ಲಿದ್ದವರನ್ನು ಪಕ್ಕ ಕೂರುವಂತೆ ಹೇಳಿದರು. ವೇದಿಕೆಯಲ್ಲಿಲ್ಲು ಸಹ ಪ್ರಮುಖವಾಗಿ ಪ್ರೊ. ಮಲ್ಲಿಕಾರ್ಜುನಪ್ಪ ನಂತರ ನಾಗಶ್ರಿ ಅವರಿಗೆ ಭಾಷಣ ಮಾಡಲು ಅವಕಾಶ ನೀಡಿ ಯುವ ನಾಯಕತ್ವವನ್ನು ಬೆಂಬಲಿಸುವ ವಿಶ್ವಾಸವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದಂತೆ ಇತ್ತು.
ಅಲ್ಲದೇ ವೇದಿಕೆಯಲ್ಲಿಯು ಸಹ ನಾಗಶ್ರೀಪ್ರತಾಪ್ ಅವರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡು ಮಾತನಾಡಿದ್ದು, ಅವರ ಅಭಿಮಾನಿಗಳಲ್ಲಿ ಒಂದು ರೀತಿಯ ಮಂದಹಾಸ ಮಾಡಿತ್ತು. ನಾಗಶ್ರೀಗಳ ಹೆಸರೇಳುತ್ತಿದ್ದಂತೆ ಜಯಕಾರ ಹೆಚ್ಚಾಗಿತ್ತು. ಮೆರವಣಿಗೆಯಲ್ಲಿ ಜೊತೆಯಲ್ಲಿ ಬಂದ ನಾಗಶ್ರೀ ಸೂಚಕರಾಗಿಯು ಸಹ ನಾಮಪತ್ರ ಸಲ್ಲಿಕೆಯಲ್ಲಿದ್ದರು.
ನಾಗಶ್ರೀ ಪ್ರತಾಪ್ ಭಾಷಣದಲ್ಲಿಯು ಸಹ ಸೋಮಣ್ಣ ಅಭಿವೃದ್ದಿ ಮತ್ತು ಕ್ರಿಯಾಶೀಲತೆ, ದಕ್ಷ ಆಡಳಿತವನ್ನು ಗುಣಗಾಣ ಮಾಡಿ, ಇಂಥ ನಾಯಕತ್ವ ನಮ್ಮ ಜಿಲ್ಲೆಗೆ ಬಹಳ ಇದೆ. ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ನಾವೆಲ್ಲರು ಗೆಲ್ಲಿಸುವ ಮೂಲಕ ನಮ್ಮ ತಂದೆ 1996 ರಲ್ಲಿ ಬಿಜೆಪಿಗೆ ಅಭ್ಯರ್ಥಿಯಾಗಿ 17 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು. ಈಗ 20 ವರ್ಷಗಳ ನಂತರ ಸೋಮಣ್ಣ ಅವರು ನಾಯಕತ್ವದಲ್ಲಿ ಇನ್ನು ಹೆಚ್ಚಿನ ಲೀಡ್‍ನಲ್ಲಿ ಗೆಲ್ಲಿಸಿ, ಕ್ಷೇತ್ರ ಹಾಗು ಜಿಲ್ಲೆಯಲ್ಲಿ ಮತ್ತೇ ಬಿಜೆಪಿ ಕಮಲವನ್ನು ಆರಳಿಸಲು ಎಲ್ಲರು ಶ್ರಮಿಸೋಣ ಎಂದರು.
ಸಮಾವೇಶದಲ್ಲಿ ಛಲವಾದಿ ನಾರಾಯಣಸ್ವಾಮಿ, ಸಂಸದ ಪ್ರತಾಪ್ ಸಿಂಹ, ಕೇಂದ್ರ ಬರಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಜಿ.ಪಂ. ಮಾಜಿ ಸದಸ್ಯರಾದ ಆರ್. ಬಾಲರಾಜು, ಸಿ.ಎನ್. ಬಾಲರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್, ಉಪಾಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ, ಮುಖಂಡರಾದ ಹನುಮಂತಶೆಟ್ಟಿ, ಕೋಡಿಮೋಳೆ ರಾಜಶೇಖರ್, ಉಡಿಗಾಲ ಕುಮಾರಸ್ವಾಮಿ, ವೆಂಕಟರಮಣಸ್ವಾಮಿ @ ಪಾಪು, ಮಲ್ಲೇಶ್, ನಗರ ಅಧ್ಯಕ್ಷ ನಾಗರಾಜು ಮೊದಲಾದವರು ಇದ್ದರು.