ಗೋವಿಂದಗಿರಿ ಚೆಕ್ ಪೋಸ್ಟ್ ಗೆ ಸಿಇಓ ಭೇಟಿ, ಸೂಕ್ತವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.27 :- ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಗೋವಿಂದಗಿರಿ ಚೆಕ್ ಪೋಸ್ಟ್ ಗೆ ಬುಧವಾರ ಸಂಜೆ ವಿಜಯನಗರ ಜಿಲ್ಲೆಯ ಜಿಲ್ಲಾಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ ಸದಾಶಿವ ಪ್ರಭು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಅಲ್ಲದೆ ಅಲ್ಲಿನ ಸಿಬ್ಬಂದಿಗಳಿಗೆ ಮಳೆ ಬಂದರೆ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದನ್ನು ಗಮನಿಸಿ ಸಂಬಂದಿಸಿದ ಅಧಿಕಾರಿಗಳಿಗೆ ಫೋನ್ ನಲ್ಲೇ ತರಾಟೆಗೆ ತೆಗೆದುಕೊಂಡು ಚೆಕ್ ಪೋಸ್ಟ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಕೆಲ ನಿಮಿಷದವರೆಗೆ ಚೆಕ್ ಪೋಸ್ಟ್ ನಲ್ಲಿದ್ದು ಸಿಬ್ಬಂದಿಯೊಂದಿಗೆ ಸೇರಿ ತಾವೇ ಖುದ್ದಾಗಿ ವಾಹನಗಳ ತಪಾಸಣೆ ನಡೆಸಲು ಮುಂದಾದರು ಹಾಗೂ ಚೆಕ್ ಪೋಸ್ಟ್  ಸಿಬ್ಬಂದಿಗಳ ತೊಂದರೆ ಬಗ್ಗೆ ವಿಚಾರಿಸಿದರು ಆಗ ಕರ್ತವ್ಯ ನಿರತ ಬಾರ್ಡರ್ ಪೊಲೀಸ್ ಒಬ್ಬರು ಹಿಂದಿಯಲ್ಲಿ ಕೇಳಿದ ಚೆಕ್ ಪೋಸ್ಟ್ ನಲ್ಲಿ ಬಿಸಿಲಿನ ತಾಪ ಜಾಸ್ತಿ ಇದ್ದು ಒಂದು ಸಣ್ಣ  ಫ್ಯಾನ್ ಇರುವುದರಿಂದ ಗಾಳಿ ವ್ಯವಸ್ಥೆ ಇಲ್ಲಾ, ಆಕಸ್ಮಿಕ ಮಳೆ ಬಂದರೆ ಚೆಕ್ ಪೋಸ್ಟ್ ನಲ್ಲಿ ರಕ್ಷಣೆ ಇಲ್ಲಾ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೇಳಿದಾಗ ತಕ್ಷಣ ಕೂಡ್ಲಿಗಿ ತಹಸೀಲ್ದಾರ್ ಹಾಗೂ ಜಿಲ್ಲಾ ಪಂಚಾಯತ್ ಎಇಇಗೆ ಕರೆ ಮಾಡಿ ಸೂಕ್ತವ್ಯವಸ್ಥೆ ಕಲ್ಪಿಸುವಂತೆ ತರಾಟೆಗೆ ತೆಗೆದುಕೊಂಡರು. ನಂತರ ಅಲ್ಲಿನ ಸಿಬ್ಬಂದಿ ಜೊತೆ ಚಹಾ ಸೇವನೆ ಮಾಡಿ ಕ್ಷೇತ್ರದ ಚೆಕ್ ಪೋಸ್ಟ್ ಗಳತ್ತ ನಡೆದರು.