ಗೋಳಿ ಬಜೆ ಮಾಡುವ ವಿಧಾನ

ದಕ್ಷಿಣ ಕನ್ನಡದ ಪ್ರಸಿದ್ಧ ತಿಂಡಿಗಳಲ್ಲಿ ಗೋಳಿ ಬಜೆ ಕೂಡ ಒಂದು. ಸಾಯಾಂಕಾಲದ ತಿಂಡಿಗೆ ಕಾಯಿ ಚಟ್ನಿ ತಿನ್ನುವುದು ಇಲ್ಲಿನವರಿಗೆ ತುಂಬಾ ಪ್ರಿಯ. ಮೆದುವಾಗಿರುವ ಗೋಳಿ ಬಜೆ ಹೊಟ್ಟೆಯೂ ತುಂಬುವುದು ಬಾಯಿಗೆ ರುಚಿಯನ್ನು ಕೂಡ ನೀಡುತ್ತದೆ. ಬೇರೆ ರಾಜ್ಯಗಳಲ್ಲಿ ಇದನ್ನು ಮೈಸೂರು ಬೋಂಡ ಎಂದು ಕರೆಯುತ್ತಾರೆ.

ಬೇಕಾಗುವ ಪದಾರ್ಥಗಳು:

ಮೈದಾ ಹಿಟ್ಟು- ೧ ದೊಡ್ಡ ಲೋಟ (ಜ್ಯೂಸ್ ಲೋಟ)
ಹುಳಿ ಮೊಸರು- ಮುಕ್ಕಾಲು ಲೋಟ + ೨ ಚಮಚ
ರುಬ್ಬಿದ ಉದ್ದಿನ ಹಿಟ್ಟು- ೧ ಸೌಟು
ಕರಿಬೇವು- ೮-೧೦ ಎಲೆಗಳು
ಹಸಿಶುಂಠಿ- ಅರ್ಧ ಇಂಚು
ಹಸಿ ಮೆಣಸು- ೨
ಸಕ್ಕರೆ- ೨ ಚಿಟಕಿ
ಸೋಡ- ೨ ಚಿಟಕಿ
ಉಪ್ಪು- ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ:
ಕರಿಬೇವು, ಹಸಿಶುಂಠಿ, ಹಸಿಮಣಸನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಸ್ವಲ್ಪವೇ ಉದ್ದಿನ ಬೇಳೆಯನ್ನು ೩-೪ ಗಂಟೆಗಳ ಕಾಲ ನೆನೆಸಿ ನುಣ್ಣಗೆ ರುಬ್ಬಿಕೊಳ್ಳಿ. (ಅಥವಾ ಇಡ್ಲಿಗೆ ರುಬ್ಬುವಾಗ ಒಂದು ಸೌಟಿನಷ್ಟು ತೆಗೆದಿಟ್ಟುಕೊಂಡಿರಿ.)

ಒಂದು ಲೋಟ ಮೈದಾ ಹಿಟ್ಟಿಗೆ ಮುಕ್ಕಾಲು ಲೋಟಕ್ಕಿಂತ ೨ ಚಮಚದಷ್ಟು ಜಾಸ್ತಿ ಹುಳಿ ಮೊಸರನ್ನು ಹಾಕಿ ಕಲಸಿಕೊಳ್ಳಿ. ಹಾಗೇ ಸಣ್ಣಗೆ ಹೆಚ್ಚಿದ ಪದಾರ್ಥಗಳನ್ನು, ರುಬ್ಬಿದ ಉದ್ದಿನ ಹಿಟ್ಟನ್ನು ಮತ್ತು ಉಪ್ಪು, ಸಕ್ಕರೆಯನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ. (ಸ್ವಲ್ಪವೂ ನೀರು ಸೇರಿಸಬಾರದು). ಸುಮಾರು ಅರ್ಧ ಮುಕ್ಕಾಲು ಗಂಟೆಗಳ ಕಾಲ ಈ ಹಿಟ್ಟು ಹಾಗೆಯೇ ಇರಲಿ.

ಗೋಲಿ ಬಜೆಯನ್ನು ಮಾಡುವ ೧೦ ನಿಮಿಷದ ಮುಂಚೆ ಚಿಟಕಿ ಸೋಡ ಹಾಕಿ ಪುನ: ಕಲಸಿಕೊಳ್ಳಿ.ಈಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು, ಎಣ್ಣೆ ಹಾಕಿ ಕಾದಾಗ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು ಕಾದ ಎಣ್ಣೆಗೆ ಬಿಟ್ಟು ಹೊಂಬಣ್ಣ ಬರುವವರೆಗೆ ಕರಿದು ಈಚೆ ತೆಗೆಯಿರಿ. ರುಚಿಯಾದ ಗೋಲಿಬಜೆ ಸಿದ್ಧ. ಕಾಯಿ ಚಟ್ನಿಯೊಂದಿಗೆ ತಿನ್ನಲು ಕೊಡಿ.

ಗೋಲಿಬಜೆಯನ್ನು ಮಾಡುವ ಕೇವಲ ೧೦ ನಿಮಿಷಗಳ ಮುಂಚೆ ಸೋಡ ಹಾಕಬೇಕು. ಇಲ್ಲವೆಂದರೆ ಇದು ಎಣ್ಣೆ ಹೀರಿಕೊಳ್ಳತ್ತದೆ. ಮೇಲೆ ತಿಳಿಸಿದ ಪ್ರಮಾಣದಲ್ಲಿ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಸುಮಾರು ಮೂರು-ನಾಲ್ಕು ಜನರಿಗೆ ಸರ್ವ್ ಮಾಡುವಷ್ಟು ಗೋಲಿಬಜೆಗಳಾಗುತ್ತವೆ.