ಗೋಲು ರಹಿತ ಡ್ರಾಗೆ ತೃಪ್ತಿಪಟ್ಟ ರನ್ನರ್‌ಅಪ್‌ ಕ್ರೊವೇಶಿಯಾ

ದೋಹಾ (ಕತಾರ್‌), ನ.೨೩- ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನದ ಮೂಲಕ ಫೈನಲ್‌ಗೆ ಪ್ರವೇಶಿಸಿ, ವಿಶ್ವದ ಗಮನ ಸೆಳೆದಿದ್ದ ಕ್ರೊವೇಶಿಯಾ ಈ ಬಾರಿಯ ಮೊದಲ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಇಲ್ಲಿನ ಅಲ್‌ ಬೈತ್‌ ಸ್ಟೇಡಿಯಂನಲ್ಲಿ ಮೊರಾಕ್ಕೊ ಹಾಗೂ ಕ್ರೊವೇಶಿಯಾ ನಡುವಿನ ಪಂದ್ಯದ ನೀರಸ ಗೋಲುರಹಿತ ಡ್ರಾನಲ್ಲಿ ಅಂತ್ಯಗೊಂಡಿದೆ.
ಕಳೆದ ವಿಶ್ವಕಪ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೇರಿದ್ದ ಕ್ರೊವೇಶಿಯಾ ಮೇಲೆ ಸಹಜವಾಗಿಯೇ ಈ ಬಾರಿ ಅಭಿಮಾನಿಗಳು ಭಾರೀ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಅಲ್ಲದೆ ಲೂಕಾ ಮಾಡ್ರಿಚ್‌, ಬ್ರೋಝ್ವಿಚ್, ಕ್ರಾಮಾರಿಚ್‌, ಪೆರಿಸಿಚ್‌ರಂಥ ಘಟನಾಘಟಿಗಳು ಕ್ರೊವೇಶಿಯಾ ತಂಡದಲ್ಲಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ ಪಂದ್ಯದಲ್ಲಿ ಕ್ರೊವೇಶಿಯಾದಿಂದ ಅಂಥ ಹೇಳಿಕೊಳ್ಳುವಂಥ ಪ್ರದರ್ಶನ ಹೊರಬರಲಿಲ್ಲ. ಪಾಸಿಂಗ್‌ ಹಾಗೂ ಪೊಸಿಷನ್‌ ವಿಚಾರದಲ್ಲಿ ಕ್ರೊವೇಶಿಯಾ ಉತ್ತಮ ಪ್ರದರ್ಶನ ನೀಡಿದ್ದರೂ ನಂತರ ಬಹುತೇಕ ಎಲ್ಲಾ ವಲಯಗಳಲ್ಲಿ ಸಮಬಲದ ಹೋರಾಟ ನಡೆದಿತ್ತು. ಅಲ್ಲದೆ ಮೊರಾಕ್ಕೋದ ಡಿಫೆಂಡರ್‌ಗಳು ಕ್ರೊವೇಶಿಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಫಲವಾಗಿದ್ದರು. ಅದರಲ್ಲೂ ಪಂದ್ಯದ ಅಂತಿಮ ಅವಧಿಯ ವೇಳೆ ಆಟದ ಗತಿಗೆ ಮತ್ತಷ್ಟು ವೇಗ ನೀಡಿದ ಕ್ರೊವೇಶಿಯಾ ಆಟಗಾರರು, ಅಕ್ಷರಶಃ ಮೊರಾಕ್ಕೊ ಮೇಲೆ ತೀವ್ರ ಹೋರಾಟ ನಡೆಸಿದರು. ಆದರೂ ಇದಕ್ಕೆ ಪ್ರತಿಫಲವೆಂಬಂತೆ ಗೋಲು ದಾಖಲಿಸುವಲ್ಲಿ ಮಾತ್ರ ಕ್ರೊವೇಶಿಯಾ ಎಡವಿತು. ಅತ್ತ ಮೊರಾಕ್ಕೋ ಕೂಡ ಗೋಲಿಗಾಗಿ ಹಲವು ಪ್ರಯತ್ನ ನಡೆಸಿದರೂ ಅದಕ್ಕೆ ಪ್ರತಿಫಲ ಲಭಿಸಲಿಲ್ಲ. ಅಂತಿಮವಾಗಿ ನಿಗದಿತ ಅವಧಿ ಅಂತ್ಯಗೊಂಡರೂ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು, ಎರಡೂ ತಂಡಕ್ಕೂ ತಲಾ ಒಂದೊಂದು ಅಂಕ ನೀಡಲಾಗಿದೆ.