ಗೋಮೂತ್ರ ಅತ್ಯಂತ ಶ್ರೇಷ್ಟ ದಿವ್ಯೌಷಧಿü: ಬಳೂಟಗಿ

ನರೇಗಲ್ಲ,ನ.14: ಎಲ್ಲರೂ ಗೋವುಗಳನ್ನು ಸಾಕಲು ಮುಂದಾಗಬೇಕು. ನಮ್ಮ ದೇಶಿ ಆಕಳುಗಳ ಹೊಟ್ಟೆಯಲ್ಲಿ ಕೋಟ್ಯಾನುಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬುಗೆ ಬಹಳಷ್ಟು ಹಿಂದಿನಿಂದಲೂ ನಮ್ಮ ಭಾರತೀಯರಲ್ಲಿದೆ. ಆದ್ದರಿಂದ ರೈತರೆಲ್ಲರೂ ದೇಶಿ ಆಕಳುಗಳನ್ನು ಸಾಕಲು ಮುಂದಾಗಬೇಕೆಂದು ಕುಷ್ಟಗಿಯ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಹೇಳಿದರು.
ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದಲ್ಲಿ ಮಾತನಾಡಿದ ಅವರು ಗೋಮೂತ್ರ ಅತ್ಯಂತ ಶ್ರೇಷ್ಟ ದಿವ್ಯೌಷಧಿüಯಾಗಿದ್ದು, ಗೋಮೂತ್ರ ಸೇವನೆಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದೆಂದರು.
ರೈತರು ತಮ್ಮ ಕೃಷಿಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಹೊಸಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕೆಂದು ದೇವೇಂದ್ರಪ್ಪ ಹೇಳಿದರು.
ಭೂಮಿಗೆ ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಹಾಕಿರಿ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಬದಲಾಗಿ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಭೂಮಿ ಬಂಜರು ಭೂಮಿಯಾಗಿ ಒಂದುದಿನ ನಿಮಗೆ ಬೆಳೆಯನ್ನೇ ನೀಡದಂತಾಗಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ಷ.ಬ್ರ.ರಾಜಶೇಖರ ಶಿವಾಚಾರ್ಯರು ಪ್ರವಚನ ನೀಡಿ ಜಗದ್ಗುರು ರೇಣುಕಾಚಾರ್ಯರು ಜಗತ್ತಿನ ಸಕಲ ಜೀವಿಯನ್ನೂ ಪ್ರೀತಿಸುವ ದೇವರಾಗಿದ್ದರು. ನಮ್ಮ ಭಾವ ಹೇಗಿರುತ್ತದೆಯೋ ಹಾಗೇ ಭಕ್ತಿಯೂ ಇರುತ್ತದೆ. ಆದ್ದರಿಂದ ಭಾವಿಕ ಭಕ್ತರನ್ನೇ ದೇವರಂತೆ ಕಂಡ ಮಹಾಮಹಿಮರು ರೇಣುಕಾಚಾರ್ಯರು ಎಂದು ಶ್ರೀಗಳು ತಿಳಿಸಿದರು.
ಜಗದ್ಗುರು ಶ್ರೀ ರೇಣುಕಾಚಾರ್ಯರು ಸ್ವಯಂ ಶಿವನ ಸಂಭೂತರೇ ಆಗಿದ್ದರು. ಭಕ್ತರಲ್ಲಿನ ಅಹಂಕಾರವನ್ನು ಹೊಡೆದೋಡಿಸುವಲ್ಲಿ ಅವರು ಅಹರ್ನಿಶಿ ಶ್ರಮಿಸಿದರು. ತಮ್ಮ ಅನೇಕ ಪವಾಡಗಳು ಮತ್ತು ಲೀಲೆಗಳ ಮೂಲಕ ಅವರು ಮಾನವ ರೂಪದ ಭಗವಂತನೇ ಆದರು ಎಂದು ಷ.ಬ್ರ. ರಾಜಶೇಖರ ಶಿವಾಚಾರ್ಯರು ತಿಳಿಸಿದರು.
ತುಲಾಭಾರ ಸ್ವೀಕರಿಸಿದ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿ ಪ್ರಗತಿಪರ ರೈತರಾದ ದೇವೇಂದ್ರಪ್ಪ ಬಳೂಟಗಿ ಅವರ ಕೃಷಿ ಸಾಹಸಗಳನ್ನು ನೀವೂ ಮಾಡಿ ನೀವೂ ಪ್ರಗತಿಪರ ಕೃಷಿಕರಾಗಿರಿ ಎಂದು ರೈತರಿಗೆ ಕಿವಿಮಾತು ಹೇಳಿದರು. ಮಠಮಾನ್ಯಗಳು ಆಧ್ಯಾತ್ಮವನ್ನು ಮಾರುವ ಅಂಗಡಿಗಳಾಗಿವೆ. ಇಲ್ಲಿ ಸಿಗುವ ಜ್ಞಾನ, ಆಧ್ಯಾತ್ಮದ ಸರಕನ್ನು ನೀವುಗಳು ನಿಮ್ಮ ಜೀವನದಲ್ಲಿ ಸದುಪಯೋಗಪಡಿಸಿಕೊಂಡರೆ ನಿಮ್ಮ ಬಾಳು ಬಂಗಾರವಾಗುತ್ತದೆ. ಸಾದ್ಯವಾದಷ್ಟು ನೀವುಗಳೆಲ್ಲ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ, ಸ್ವದೇಶಿ ಉಡುಪುಗಳನ್ನು ಧರಿಸುವ ದೃಢ ಸಂಕಲ್ಪ ಮಾಡಬೇಕು. ಇದರಿಂದ ನಮ್ಮ ದೇಶದ ಆದಾಯ ಹೆಚ್ಚಾಗಿ ನಾವುಗಳು ನೆಮ್ಮದಿಯಿಂದ ಬದುಕಲು ಅನುಕೂಲವಾಗುತ್ತದೆ ಎಂದು ಶ್ರೀಗಳವರು ತಿಳಿಸಿದರು.
ರುದ್ರಯ್ಯ ಸೊಬರದಮಠ ನಿರೂಪಿಸಿ, ಸ್ವಾಗತಿಸಿದರು. ಡಾ. ಆರ್‍ಕೆ. ಗಚ್ಚಿನಮಠ ಮತ್ತು ರೇವಣಸಿದ್ದಪ್ಪ ನರಗುಂದ ಪ್ರಸಾದ ಸೇವೆಯನ್ನು ವಹಿಸಿಕೊಂಡಿದ್ದರು.