ಗೋಮಯ ದೀಪಾವಳಿ ಆಚರಣೆಗಾಗಿ ವಿಶಿಷ್ಟ ಹಣತೆ ಮಾರುಕಟ್ಟೆಯಲ್ಲಿ ಲಭ್ಯ

ಕಲಬುರಗಿ,ನ.12: ಚೀನಾ ಉತ್ಪನ್ನಗಳಿಗೆ ಸೆಡ್ಡು ಹೊಡೆಯಲು ಆರಂಭಿಸಲಾಗಿರುವ ವಿಶಿಷ್ಟ ಗೋಮಯ ದೀಪಾವಳಿ ಆಚರಣೆಗಾಗಿ ತಯಾರಿಸಲಾದ ವಿಶಿಷ್ಟ ಹಣತೆಗಳು (ದೀಪಗಳು) ಮಾರುಕಟ್ಟೆಯಲ್ಲಿ ಲಭ್ಯ ಇವೆ ಎಂದು ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಸಚಿವಾಲಯ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ್ (ಕೇಶವ) ಮೋಟಗಿ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಮಧೇನು ಆಯೋಗವು ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಗೋವು ಸಾಕುವ ರೈತರು ಮತ್ತು ಗೋಶಾಲೆಗಳು ಸ್ವಾವಲಂಬಿ ಜೀವನದೊಂದಿಗೆ ಗೋಮಯ ಉತ್ಪನ್ನಗಳ ಮಹತ್ವದ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ ಎಂಧರು.
ಕಾರ್ಯದೊಂದಿಗೆ ನಗರದ ಆಳಂದ್ ರಸ್ತೆಯಲ್ಲಿರುವ ನಂದಿ ಎನಿಮಲ್ ವೆಲಫೇರ್ ಸೊಸೈಟಿ ಆಫ್ ಗುಲಬರ್ಗಾ, ಪಯೋನಿಧಿ ಗೋದಾಮ ಸೈಯ್ಯದ್ ಚಿಂಚೋಳಿ, ಶ್ರೀ ಮಾಧವ ಗೋಶಾಲೆ ಕುಸನೂರ್ ಅಲ್ಲದೆ, ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಕೈ ಜೋಡಿಸಿವೆ. ಗೋಶಾಲೆಗಳಲ್ಲಿ ಇರುವ ದೇಶಿ ಹಸುವಿನ ಸೆಗಣಿಯಿಂದ ತಯಾರಿಸಿದ (ಹಣತೆ) ದೀಪಗಳು, ಸೆಗಣಿ ದೀಪ ಬೆಳಗಿಸಿದರೆ ಪರಿಸರ ಸಂರಕ್ಷಣೆಯಲ್ಲಿಯೂ ಕೈ ಜೋಡಿಸಿದಂತಾಗುತ್ತದೆ. ದೀಪಗಳ ತಯ್ಯಾರಿಕೆಯಲ್ಲಿ ಯಾವುದೇ ರಾಸಾಯನಿಕ ಬಳಸಿಲ್ಲ. ಹಸಿ ಗೋಮಯ ಮತ್ತು ಗೋಮೂತ್ರ ಅಕ್ಕಿ ಗಂಜಿ ಮಿಶ್ರಿತ ದೊಂದಿಗೆ ಕೈಯಿಂದ ಹಣತೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಸರ್ಕಾರದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ನಂದಿ ಎನಿಮಲ್ ವೆಲಫೇರ ಸೊಸೈಟಿ ಆಫ್ ಗುಲಬರ್ಗಾ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ವಿಶಿಷ್ಟ ಗೋಮಯ ದೀಪಾವಳಿ ಆಚರಿಸಿ” ಎಂಬ ಅಭಿಯಾನ ರಾಷ್ಟ್ರೋತ್ಥಾನ್ ಬೆಂಗಳೂರು ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗೋವು ಬರಿ ಹಾಲಿನ ಉತ್ಪನ್ನಗಳಿಗೆ ಸೀಮಿತಗೊಳಿಸದೆ ಗೋವಿನ ಇತರೆ ಉತ್ಪನ್ನಗಳಿಂದ ಹಣತೆ, ಗಿಡ ನೆಡುವ ಕುಂಡ, ಧೂಪ, ಹಾಗೂ ವಿವಿಧ ಮೂರ್ತಿಗಳು ತಯ್ಯಾರ ಮಾಡಬಹುದು. ಈ ಗೋವಿನ ಉತ್ಪನ್ನಗಳ ತಯ್ಯಾರಿಕೆಯಿಂದ ಗೋವಿನ ಸಂರಕ್ಷಣೆದೊಂದಿಗೆ ಪಾರಂಪರಿಕವಾದ ತಳಿಯ ಸಂರಕ್ಷಣೆಯೊಂದಿಗೆ ಕ್ಷೀಣಿಸುವ ಹಂತದ ತಳಿಯ ಸಂತತಿ ಸಂರಕ್ಷಿಸುವುದು, ರೈತರ ಆದಾಯ ದ್ವಿಗುಣಗೊಳಿಸಲಿಕ್ಕೆ ಹೆಚ್ಚಿನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಗೋವಿನ ಸೆಗಣಿಯಿಂದ ತಯಾರಿಸಿದ ಹಣತೆಯು ಧಾರ್ಮಿಕ ಆಚರಣೆ ಮತ್ತು ಪರಿಸರದ ಮಹತ್ವ ಸಾರುವ ಪೂರಕ ಕೆಲಸ ಮತ್ತು ಮನುಷ್ಯನ ಆರೋಗ್ಯ ವೃದ್ಧಿಗೆ ಅಗತ್ಯವಿರುವ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ತಿಳಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ. ಅಲ್ಲದೆ ಚೀನಾ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ನಿರ್ಧಾರವಾಗಿದೆ. ಈಗಾಗಲೇ 15ಕ್ಕೂ ಅಧಿಕ ರಾಜ್ಯಗಳು ಕಾಮಧೇನು ಆಯೋಗದ ಅಭಿಯಾನದ ಭಾಗಿಯಾಗಿವೆ ಎಂದು ಅವರು ಹೇಳಿದರು.
ಈ ವರ್ಷದ ದೀಪಾವಳಿ ಹಬ್ಬವು ನಗರದ ನಾಗರಿಕರು ಸೆಗಣಿಯಿಂದ ತಯಾರಿಸಿದ ಹಣತೆಯಲ್ಲಿ ಹೆಚ್ಚು ಹೆಚ್ಚು ದೀಪಗಳನ್ನು ಹಚ್ಚಿ ದೀಪಾವಳಿಯನ್ನು ವಿಶಿಷ್ಟ ಗೋಮಯ ದೀಪಾವಳಿ ಆಚರಿಸಲು ಎಲ್ಲರೂ ಕೂಡಾ ಪರಿಸರಸ್ನೇಹಿ ಹಣತೆಗಳನ್ನು ಹಚ್ಚಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣಾಜಿ ಜೋಶಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸುಭಾಷ್ ಕಾಂಬಳೆ, ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಗುರುಶಾಂತ್ ಟೆಂಗಳಿ, ನಂದಿ ಎನಿಮಲ್ ವೆಲ್‍ಫೇರ್ ಸೊಸೈಟಿ ಅಧ್ಯಕ್ಷ ಬಸವರಾಜ್ ಜಿ. ಉಪ್ಪಿನ್ ಮುಂತಾದವರು ಉಪಸ್ಥಿತರಿದ್ದರು.