ಗೋಪಿಕೃಷ್ಣ ಟಿಕೆಟ್‌ಗಾಗಿ ಬೆಂಬಲಿಗರ ಪ್ರತಿಭಟನೆ

ಬೆಂಗಳೂರು,ಏ.೩:ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದ ಟಿಕೆಟ್‌ನ್ನು ಮಡಿವಾಳ ಸಮುದಾಯದ ಗೋಪಿಕೃಷ್ಣ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿಷದ ಬಾಟಲಿ ಹಿಡಿದು ಹೈ ಡ್ರಾಮವೇ ನಡೆಯಿತು.
ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣ ಅವರನ್ನು ಬಿಟ್ಟು ಬೇರೆಯವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಬೇರೆಯವರಿಗೆ ಟಿಕೆಟ್ ನೀಡಿದರೆ ವಿಷ ಕುಡಿಯುವುದಾಗಿ ಹೇಳಿ ವಿಷದ ಬಾಟಲಿಗಳನ್ನು ಪ್ರದರ್ಶಿಸಿದರು.
ಈ ಹಂತದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ವಿಷದ ಬಾಟಲಿಗಳನ್ನು ಕಿತ್ತುಕೊಳ್ಳಲು ಮುಂದಾದಾಗ ಗೋಪಿಕೃಷ್ಣ ಬೆಂಬಲಿಗರು ಹಾಗೂ ಪೊಲೀಸರ ನಡುವೇ ವಾಗ್ವಾದವೇ ನಡೆಯಿತು.
ಯೋಗೇಶ್‌ಬಾಬು ಬೆಂಬಲಿಗರ ಪ್ರತಿಭಟನೆ
ಚಿಗ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಿಂದ ಯೋಗೇಶ್‌ಬಾಬು ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಯೋಗೇಶ್‌ಬಾಬು ಟಿಕೆಟ್‌ಗೆ ಆಗ್ರಹಿಸಿದರು.
ಮೊಳಕಾಲ್ಮೂರಿನಿಂದ ಬಸ್ ಹಾಗೂ ಇತರ ವಾಹನಗಳಲ್ಲಿ ಆಗಮಿಸಿದ ನೂರಾರು ಮಂದಿ ಯೋಗೇಶ್‌ಬಾಬು ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಇವರಿಗೇ ಟಿಕೆಟ್ ನೀಡಬೇಕು. ಬೇರೆ ಪಕ್ಷದಿಂದ ಬರುವವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು.