ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಏ.05:- ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಶ್ರೀ ಹಿಮವಾದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರದಂದು ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಇಲ್ಲಿನ ಜಾತ್ರೆ ವಿಶೇಷವೆಂದರೆ ಹಂಬಿನಿಂದ ರಥವನ್ನು ಎಳೆಯಲಿದ್ದಾರೆ. ಅದರಂತೆ, ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮಸ್ಥರು ಕಾಡಿನಲ್ಲಿ ಸಿಗುವ ಒತ್ತರದ ಹಂಬುಗಳನ್ನು ತಂದು ಹಗ್ಗ ತಯಾರಿಸಿದ್ದರು. ಹೊನ್ನೇಗೌಡನಹಳ್ಳಿ ಗ್ರಾಮಸ್ಥರು ತೇರಿಗೆ ಬೇಕಾದ ಬೊಂಬುಗಳನ್ನು ತಂದು ರಥವನ್ನುತ ಯಾರು ಮಾಡಿದ್ದರು. ಸಾವಿರಾರು ಭಕ್ತರು ಹಂಬಿನಿಂದ ರಥ ಎಳೆದು ಪುನೀತರಾದರು.
ಭಕ್ತರಿಗೆ ದೇವರ ದರ್ಶನ ಪಡೆಯಲು ಬೆಟ್ಟದ ತಪ್ಪಲಿನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು, ಬೇಸಿಗೆ ಅವಧಿಯಾದ್ದರಿಂದ ಕಾಡ್ಗಿಚ್ಚಿನ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು.