ಗೋನಾಳ ಗ್ರಾಮಕ್ಕೆ ಸಚಿವರ ಭೇಟಿ: ಬೆಳೆಹಾನಿ ವೀಕ್ಷಣೆ

ರಾಯಚೂರು.ನ.೧೬- ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ನವೆಂಬರ್ ೧೫ರಂದು ರಾಯಚೂರು ತಾಲೂಕಿನ ಗೋನಾಳ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಬೆಳೆ ಹಾನಿಯ ವೀಕ್ಷಣೆ ನಡೆಸಿದರು.
ಗೋನಾಳ ಗ್ರಾಮದ ಚಂದ್ರಕಾಂತ ಎಂಬುವವರ ೨೫ ಎಕರೆ ಜೋಳ ಮತ್ತು ತೊಗರಿ ಬೆಳೆ ಹಾನಿಯನ್ನು ಪರಿಶೀಲಿಸಿ ನಂತರ ಆಂಜಿನೇಯ್ಯ ಎಂಬುವವರ ೫ ಎಕರೆಯಲ್ಲಿ ಬೆಳೆದ ಹತ್ತಿ ಬೆಳೆಯನ್ನು ವೀಕ್ಷಿಸಿದರು. ಇದೇ ವೇಳೆ ಮಾತನಾಡಿದ ಅವರು, ಈಗಾಗಲೇ ಬರ ಪೀಡಿತ ಪ್ರದೇಶವೆಂದು ಜಿಲ್ಲೆಯನ್ನು ಘೋಷಣೆ ಮಾಡಲಾಗಿದ್ದು, ಈ ಕುರಿತು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸ್ಥಳ ಪರೀಶೀಲನೆ ನಡೆಸಿದ್ದು, ರೈತರೊಂದಿಗೂ ಸಂವಾದ ಮಾಡಲಾಗಿದೆ. ಬಹಳಷ್ಟು ಕಡೆ ಬೆಳೆ ಹಾನಿಯಾಗಿದೆ. ಕೆಲವೆಡೆ ಅಕಾಲಿಕ ಮಳೆಯಿಂದ ಭತ್ತ ಬೆಳೆಯಲ್ಲಿ ಹಾನಿ ಉಂಟಾಗಿದೆ. ೫೧,೦೦ ಹೆಕ್ಟರ್‌ಗಳಷು ಹಾನಿಯಾಗಿರುವುದು ಮೇಲ್ನೋಟಕ್ಕೆ ಕಮಡುಬಂದಿದ್ದು, ಕೆಲವು ಪ್ರದೇಶಗಳಲ್ಲಿ ಹಿಂಗಾರಿನಲ್ಲಿ ಜೋಳ ಬೆಳೆ ಬೆಳೆದು ಮಳೆ ಕೊರತೆಯಿಂದ ಹಾನಿಯಾಗಿದೆ. ಸಂಪೂರ್ಣವಾದ ಸರ್ವೆ ನಡೆಸಿ ಅಂತಿಮ ಬೆಳೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಸೀರ ಆಹ್ಮದ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಸಹಾಯಕ ಆಯುಕ್ತೆ ಮಹಿಬೂಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.