ಗೋನಾಳಲ್ಲಿ ಪುನ: ಕಾಣಿಸಿಕೊಂಡ 5 ಭೇದಿ ಪ್ರಕರಣ, ಅವರಲ್ಲಿ 4 ಜನ ಚೇತರಿಕೆ


ಸಂಜೆವಾಣಿ ವಾರ್ತೆ 
ಕಂಪ್ಲಿ,ಜು.27: ಇಲ್ಲಿಗೆ ಸಮೀಪದ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಾಳ್ ಗ್ರಾಮದಲ್ಲಿ ರವಿವಾರ ಸಂಜೆ ಕಲುಷಿತ ನೀರು ಸೇವನೆಯಿಂದ 18 ಜನರಿಗೆ ವಾಂತಿ-ಭೇದಿಯಾಗಿತ್ತು, ಸೋಮವಾರ ಬೆಳಿಗ್ಗೆ ಓರ್ವ ಬಾಲಕಿ ಮೃತ ಪಟ್ಟ ದಾರುಣ ಘಟನೆ ನಡೆದಿತ್ತು. ಮಂಗಳವಾರ ಪುನ: 5 ಜನರಲ್ಲಿ ಬೇಧಿ ಕಾಣಿಸಿಕೊಂಡಿದ್ದು, ಗ್ರಾಮದ ಜನರಲ್ಲಿ ಆತಂಕ ಉಂಟಾಗಿದೆ.
ಮಂಗಳವಾರ ಭೇದಿ ಕಾಣಿಸಿಕೊಂಡಿರುವ 5 ಜನರಲ್ಲಿ 4 ಜನ ಚೇತರಿಸಿಕೊಂಡಿದ್ದು, ಒಬ್ಬರಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರವಿವಾರ ಸಂಜೆ ವಾಂತಿ-ಭೇದಿ ಕಾಣಿಸಿಕೊಂಡಿದ್ದ 18 ಜನರಲ್ಲಿ 17ಜನರು ಚೇತರಿಸಿಕೊಂಡಿದ್ದು, ಒಬ್ಬರು ಮಾತ್ರ ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೊತೆ ತೆರಳಿದ್ದ ಓರ್ವ ವ್ಯಕ್ತಿಗೆ ಇಂದು ಭೇದಿ ಕಾಣಿಸಿಕೊಂಡಿದ್ದು, ವಿಮ್ಸ್‍ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 
ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ಗೋನಾಳ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಅಂಗನವಾಡಿ, ಆಶಾಕಾರ್ಯಕರ್ತರು ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದು, ವಾಂತಿ-ಭೇದಿ ಕಂಡವರನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಗೋನಾಳ ಗ್ರಾಮಕ್ಕೆ ಸುಗ್ಗೇನಹಳ್ಳಿ, ಹಂಪಾದೇವನಹಳ್ಳಿ ಗ್ರಾಮಗಳಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.
26ಕಂಪ್ಲಿ01 ಕಂಪ್ಲಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸುತ್ತಿರುವುದು.