ಗೋದ್ರಾ ಹತ್ಯಾಕಾಂಡ: 8 ಅಪರಾಧಿಗಳಿಗೆ ಸುಪ್ರೀಂ ಜಾಮೀನು

ನವದೆಹಲಿ,ಏ.21-ಗೋದ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಂಟು ಮಂದಿ ಅಪರಾಧಿಗಳಿಗೆ ಸರ್ವೋಚ್ಛ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.
ಇನ್ನಿತರ ನಾಲ್ವರ ಜಾಮೀನು ಅರ್ಜಿಗಳನ್ನು ಪರಿಗಣಿಸಲು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ನರಸಿಂಹರಾವ್ ಅವರಿದ್ದ ಪೀಠ ನಿರಾಕರಿಸಿದೆ.
ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಪಾತ್ರದ ಬಗ್ಗೆ ಕೆಲವೊಂದು ವಿಷಯಗಳಿವೆ ಎಂದು ಹೇಳಿದರು.ಅಪರಾಧಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿ, ಎಂಟು ಮಂದಿಗೆ ಜಾಮೀನು ನೀಡಬೇಕು. ಇನ್ನಿತರ ನಾಲ್ವರು ಅಪರಾಧಿಗಳಿಗೆ ಜಾಮೀನಿಗೆ ತುಷಾರ್ ಮೆಹ್ತಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದರು.ಅಲ್ಲದೆ ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಮುಂದೂಡಬೇಕೆಂದು ಹೇಳಿದರು.ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಮೆಹ್ತಾ, ಇವುಗಳನ್ನು ಪುನರುಜ್ಜೀವನಗೊಳಿಸಲು ನ್ಯಾಯಾಲಯವು ಮುಕ್ತವಾಗಿ ಬಿಡಬಹುದು ಎಂದು ಹೇಳಿದರು.ಆದರೆ ಪೀಠವು ಎಂಟು ಅಪರಾಧಿಗಳಿಗೆ ಜಾಮೀನು ನೀಡಿದೆ. ಸೆಷನ್ಸ್ ನ್ಯಾಯಾಲ ಯವು ವಿಧಿಸಬಹುದಾದ ಅಂತಹ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಪೀಠ ನಿರ್ದೇಶಿಸಿತು.2002 ಫೆಬ್ರವರಿಯಲ್ಲಿ ಅಯೋಧ್ಯೆಯಿಂದ 59 ಜನರು ವಾಪಸ್ ಬರುತ್ತಿದ್ದಾಗ ಗೋದ್ರಾ ರೈಲಿಗೆ ಉದ್ರಿಕ್ತ ಗುಂಪು ಬೆಂಕಿಹಚ್ಚಿದ್ದರಿಂದ 59 ಮಂದಿ ಸಾವನ್ನಪ್ಪಿದ್ದರು.