ಗೋದುತಾಯಿ ಕಾಲೇಜಿನಲ್ಲಿ ‘ಅವ್ವ ಪ್ರಶಸ್ತಿ’ ಪ್ರದಾನ ಸೋಲು ಯಶಸ್ಸಿನ ಮೆಟ್ಟಿಲು : ಪೂಜ್ಯ ಅವ್ವಾಜಿ

ಕಲಬುರಗಿ,ಸೆ.9: ಜೀವನದಲ್ಲಿ ಅನೇಕ ಸೋಲು ಗೆಲುವುಗಳು ಬರುತ್ತವೆ ಅವುಗಳನ್ನು ಎದುರಿಸಿ ಯಶಸ್ಸಿನ ಮಾರ್ಗದಲ್ಲಿ ನಡೆಯಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾವಿರಾರು ಗಿಡ ಮರಗಳನ್ನು ಬೆಳೆಸಿ ನಿಸರ್ಗದೇವತೆಯನ್ನು ಎತ್ತಿ ಹಿಡಿದ ಪದ್ಮಶ್ರೀ ಪ್ರಶಸ್ತಿ ಪಡೆದ ತುಳಸಿಗೌಡ ತಾಯಿ ಅವರ ಕೆಲಸ ಬಹಳ ಶ್ಲಾಘನೀಯವಾಗಿದೆ. ಅವರಿಗೆ ಈ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ ಎಂದರು. ಉತ್ತಮ ಅಭ್ಯಾಸ, ಒಳ್ಳೆಯ ಸಂಸ್ಕಾರ ನೀಡುವುದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮೂಲ ಧ್ಯೇಯವಾಗಿದೆ. ಉತ್ತಮ ಅಭ್ಯಾಸ ಮಾಡಿ ಒಳ್ಳೆಯ ನಾಗರಿಕರಾಗಿ ಬೆಳೆದು ಹೆತ್ತವರಿಗೂ, ಗುರುಗಳಿಗೂ ಕೀರ್ತಿ ತರಬೇಕೆಂದು ವಿದ್ಯಾರ್ಥಿನಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಹೈಕೋರ್ಟ್‍ನ ಹಿರಿಯ ವಕೀಲೆ ಶ್ರೀಮತಿ ಮಂಜುಳಾ ಎನ್.ತೇಜಸ್ವಿ ಮಾತನಾಡಿ, ಜೀವನ ಹೂವಿನ ಹಾಸಿಗೆಯಲ್ಲ ಹಾಗೆ ಮುಳ್ಳಿನ ಹಾಸಿಗೆಯೂ ಅಲ್ಲ. ಅದು ಕಷ್ಟ ಸುಖಗಳ ಸಂಗಮ. ಜೀವನದಲ್ಲಿ ಏನೆ ಬಂದರೂ ಅದನ್ನು ಎದುರಿಸುವ ಧೈರ್ಯ ಹೆಣ್ಣು ಮಕ್ಕಳು ಬೆಳೆಸಿಕೊಳ್ಳಬೇಕು. ಹೆಣ್ಣು ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅತ್ತೆಯಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುವ ಶಕ್ತಿ ಹೊಂದಿದ್ದಾಳೆ. ಈ ಸಮಾಜವನ್ನು ಮುಂದುವರೆಸಿಕೊಂಡು ಹೋಗುವ ಶಕ್ತಿ ಹೆಣ್ಣಿನಲ್ಲಿದೆ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುವ ಗುಣ ಹೆಣ್ಣಿನಲ್ಲಿದೆ. ಅದಕ್ಕಾಗಿ ವಿದ್ಯಾರ್ಥಿನಿಯರು ಧೈರ್ಯದಿಂದ ಮುನ್ನುಗ್ಗಿ, ಹೆದರಬೇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವೇಶ್ವರ ದೇವಸ್ಥಾನ ಆವರಣ ಶಾಲಾ ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಸಾವಿರಾರು ಗಿಡಗಳನ್ನು ಹಚ್ಚಿ ಪಾಲನೆ, ಪೋಷಣೆ ಮಾಡಿ ಮಾನವ ಲೋಕಕ್ಕೆ ಮಾತ್ರವಲ್ಲ ಪಕ್ಷಿ ಲೋಕಕ್ಕು ಆಸರೆಯಾಗಿ ಯಾವುದೇ ಫಲಾಪೇಕ್ಷೆ ಇಲ್ಲದ ಸರಳ ವ್ಯಕ್ತಿ ಶ್ರೀಮತಿ ತುಳಸಿ ಗೌಡ ಅವರ ಜೀವನ ಆದರ್ಶವಾಗಿದೆ. ಶರಣಬಸವೇಶ್ವರ ಸಂಸ್ಥಾನ ಇಂತಹ ಸಾಧನೆಗೈದವರನ್ನು ಸದಾ ಗೌರವಿಸುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸುರ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರೆ, ಕೃಪಾಸಾಗರ ಗೊಬ್ಬುರ ವಂದಿಸಿದರು. ಕು.ಪ್ರೀತಿ ಹಿರೇಮಠ ಮತ್ತು ಕು.ಜವೆರಿಯಾ ನಿರೂಪಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮತ್ತು ಪ್ರಾಧ್ಯಾಪಕರು ಪ್ರಾರ್ಥಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು.ವೈಶಾಲಿ ನಾಟೀಕರ, ಸಾಧನೆ ಮಾಡಿದ ಪ್ರಾಧ್ಯಾಪಕರುಗಳಿಗೆ ಮತ್ತು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಶ್ರೀಮತಿ ರೋಹಿಣಿ ಕೆ. ಮತ್ತು ಕು.ಅಂಜಲಿ ಅವರನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು.


ಅವ್ವ ಪ್ರಶಸ್ತಿ ಸ್ವೀಕರಿಸಿದ ಪದ್ಮಶ್ರೀ ಶ್ರೀಮತಿ ತುಳಸಿಗೌಡ ಮಾತನಾಡಿ, ನಿಸರ್ಗದ ಬಗ್ಗೆ ತಮಗೆ ಅಪಾರ ಪ್ರೀತಿ ಇದ್ದು, ತಾವು ಗಿಡ ಮರಗಳನ್ನು ಬೆಳೆಸಿ ಅದರಿಂದ ಪಶು, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಬೇಕೆಂದು ನಾನು ಸಾವಿರಾರು ಗಿಡಗಳನ್ನು ಹಚ್ಚಿದ್ದೇನೆ ಎಂದು ಹೇಳಿದರು.