ಗೋದುತಾಯಿ ಕಾಲೇಜಿನಲ್ಲಿ ಅವ್ವ ಪ್ರಶಸ್ತಿ ಪ್ರದಾನಸರ್ವಕ್ಷೇತ್ರದಲ್ಲಿ ಮಹಿಳೆಯರ ಸಾಧನೆ : ಪೂಜ್ಯ ಅವ್ವಾಜಿ

ಕಲಬುರಗಿ,ಜು.23: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ಉನ್ನತಸ್ಥಾನಕ್ಕೇರುತ್ತಿದ್ದಾರೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಧ್ಯೆರ್ಯ, ಸತತ ಓದು, ಪರಿಶ್ರಮ, ಛಲ, ತ್ಯಾಗಗಳಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸೀಮಾಲಾ ಮಾತನಾಡಿ, ಶಿಕ್ಷಣದಿಂದ ಸ್ವಾಭಿಮಾನ ಸಮೃದ್ಧಿ ಜೀವನ ರೂಪಿಸಿಕೊಳ್ಳಬಹುದಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯ, ಸಾಮಥ್ರ್ಯ, ದಕ್ಷತೆಯೂ ಮುಖ್ಯವಾಗಿದೆ. ನಮ್ಮ ಚಾರಿತ್ರ್ಯ ನಾವೇ ನಿರ್ಮಾಣ ಮಾಡಿಕೊಳ್ಳಬೇಕಾಗಿದೆ. ಆರೋಗ್ಯ ಸಮಾಜಕ್ಕಾಗಿ ಬೇರೆ ಬೇರೆ ಕೋರ್ಸುಗಳನ್ನು ಕಲಿಯುವುದು ಅವಶ್ಯವಾಗಿದೆ. ಎಲ್ಲದಕ್ಕೂ ಶಿಕ್ಷಣವೇ ಬುನಾದಿಯಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೂಜ್ಯ ದೊಡ್ಡಪ್ಪ ಅಪ್ಪ ಅವರು ಮಹಿಳೆಯರಿಗಾಗಿ ಶಿಕ್ಷಣ ಸಂಸ್ಥೆ ಆರಂಭಿಸಿ ಈ ಭಾಗ ಶೈಕ್ಷಣಿಕವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಕಲಿತ ಅನೇಕ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಅವ್ವ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ವೈದ್ಯರಾದ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ಮಾತನಾಡಿ ತಾವು ಆಸ್ಪತ್ರೆಯ ಸಣ್ಣ ಕೆಲಸದಿಂದ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕಿಯಾಗಿರುವುದರ ಹಿಂದೆ ಬಹಳ ಪರಿಶ್ರಮವಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದಿನಲ್ಲಿ ಹೆಚ್ಚು ಸಮಯ ಕೊಡುವುದರ ಮೂಲಕ ತಂದೆತಾಯಿಯವರ ಕನಸ್ಸು ನೆರವೇರಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಅವ್ವ ಪ್ರಶಸ್ತಿ ಪಡೆದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರ ಸರಳ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಹಾಗಾಗಿಯೇ ಈ ವರ್ಷ ಅವ್ವ ಪ್ರಶಸ್ತಿ ಪೂಜ್ಯ ಡಾ.ಅಪ್ಪಾಜಿ ಮತ್ತು ಪೂಜ್ಯ ಡಾ.ಅವ್ವಾಜಿ ಸಲಹೆ ಮೇರೆಗೆ ಉನ್ನತ ಸಾಧನೆ ಮಾಡಿದ ಡಾ.ದೇಶಮಾನೆ ಅವರಿಗೆ ನೀಡಲಾಯಿತು ಎಂದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಡಿ.ಬಿ.ಕಂಬಾರ ಮಾತನಾಡಿದರು.
ಅವ್ವ ಪ್ರಶಸ್ತಿಯನ್ನು ಖ್ಯಾತ ವೈದ್ಯರಾದ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರಿಗೆ ನೇಪಾಳದ ಬಸವ ಇಂಟರನ್ಯಾಷನಲ್ ಕಾನ್ಸರೆನ್ಸ್ ಕಮಿಟಿಯವರು ‘ದಾಸೋಹ ರತ್ನ’ ಪ್ರಶಸ್ತಿ ನೀಡಿರುವುದಕ್ಕಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿ ಜಾನಕಿ ಹೊಸುರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರೆ, ಡಾ.ಸೀಮಾ ಪಾಟೀಲ ವಾರ್ಷಿಕ ವರದಿ ವಾಚನ ಮಾಡಿದರು. ಡಾ.ಪುಟ್ಟಮಣಿ ದೇವಿದಾಸ, ಕು.ರೋಹಿಣಿ , ಕು.ಭಾಗ್ಯವತಿ ಕಾರ್ಯಕ್ರಮ ನಿರೂಪಸಿದರು. ಶ್ರೀಮತಿ ದೀಶಾ ಮೆಹತಾ ವಂದಿಸಿದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಯವರು, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ವತಿಯಿಂದ ಬಂಗಾರ ಪದಕ ನೀಡಿ ಸನ್ಮಾನಿಸಲಾಯಿತು. ಮಹಾವಿದ್ಯಾಲಯ ಹೊರತರುವ ಮುತ್ತ್ಯೆದೆ, ಶೋಧ ಮ್ಯಾಗಜೀನ್‍ಗಳು ಹಾಗೆ ಬೇರೆ ಬೇರೆ ವಿಭಾಗಗಳ ಸುದ್ದಿ ಪತ್ರಿಕೆಗಳು ಬಿಡುಗಡೆಗೊಳಿಸಲಾಯಿತು.