ಗೋದಾಮಿಗೆ ಬೆಂಕಿ ಕೋಟ್ಯಂತರ ನಷ್ಟ

ಬೆಂಗಳೂರು,ಮಾ.೧೮-ಪ್ರತಿಷ್ಠಿತ ಸೂಪರ್ ಮಾರ್ಕೆಟ್‌ಗಳಿಗೆ ಸಾಗಿಸುವ ಸಾಮಗ್ರಿಗಳನ್ನು ಶೇಖರಿಸಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಂತರ ನಷ್ಟ ಸಂಭವಿಸಿರುವ ದುರ್ಘಟನೆ ಕೊತ್ತನೂರಿನ ಭೈರತಿ ಬಳಿ ಇಂದು ಮುಂಜಾನೆ ನಡೆದಿದೆ.
ಭೈರತಿ ಬಳಿಯ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಬೆಳಗಿನ ಜಾವ ೪ ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ೮ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಮತ್ತು ೨೦ಕ್ಕೂ ಹೆಚ್ಚು ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ.
ಗೋದಾಮಿನಲ್ಲಿ ಡಿ ಮಾರ್ಟ್ ಸೇರಿದಂತೆ ಪ್ರತಿಷ್ಠಿತ ಸೂಪರ್ ಮಾರ್ಕೆಟ್‌ಗಳಿಗೆ ಸಾಗಿಸುವ ಸಾಮಗ್ರಿಗಳನ್ನು ಶೇಖರಿಸಲಾಗಿತ್ತು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕೊತ್ತನೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.