ಗೋಡೌನ್‍ಗೆ ಬೆಂಕಿ: ಕಚ್ಚಾ ಸಾಮಗ್ರಿಗಳು ಸುಟ್ಟು ಭಸ್ಮ

ಕಲಬುರಗಿ,ನ.12:ನಗರದ ಕಟ್ಟಡದ ಮೇಲ್ಮಹಡಿಯಲ್ಲಿದ್ದ ಗೋಡೌನ್‍ನ ಕೋಣೆಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಬೆಳಿಗ್ಗೆ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೈಲು ನಿಲ್ದಾಣದ ಪ್ರದೇಶದಲ್ಲಿ ವರದಿಯಾಗಿದೆ.
ವಿಠಲ್ ಹಂಗರಕರ್ ಅವರಿಗೆ ಸೇರಿದ ಕಟ್ಟಡದಲ್ಲಿ ಡಾಗಾ ಅವರು ಕಿರಾಣಿ ಅಂಗಡಿಯ ಕೆಲ ಕಚ್ಚಾ ಸಾಮಗ್ರಿಗಳನ್ನು ಕೋಣೆಯಲ್ಲಿಯೇ ಗೋಡೌನ್ ಆಗಿ ಪರಿವರ್ತಿಸಿ ಇಟ್ಟಿದ್ದರು. ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದರಿಂದ ಆ ಎಲ್ಲ ಕಚ್ಚಾ ಸಾಮಗ್ರಿಗಳು ಸುಟ್ಟು ಭಸ್ಮಗೊಂಡಿವೆ. ಬೆಂಕಿ ಅವಘಡ ಸಂಭವಿಸಿದಾಗ ಆ ಕಟ್ಟಡದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಯಾರಿಗೂ ಯಾವುದೇ ರೀತಿಯ ಅಪಾಯ ಆಗಿಲ್ಲ.
ಬೆಂಕಿ ಕೋಣೆಗೆ ಹೊತ್ತಿಕೊಳ್ಳುತ್ತಿದ್ದಂತೆಯೇ ಗೋಡೌನ್‍ನ ಮಾಲಿಕ ಬ್ರಿಜ್‍ಗೋಪಾಲ್ ಡಾಗಾ, ಪ್ರವೀಣ್ ಡಾಗಾ, ಜಗತ್‍ಸಿಂಗ್ ಸೇರಿದಂತೆ ಅಂಗಡಿಯಲ್ಲಿನ ಸಿಬ್ಬಂದಿಗಳೆಲ್ಲರೂ ಕೊಡಗಳ ಮೂಲಕ ನೀರು ಹಾಕಿ ಶಮನಗೊಳಿಸಿದರು. ಬೆಂಕಿ ಹೊತ್ತಿಕೊಂಡ ಕುರಿತು ಸುದ್ದಿ ತಿಳಿದು ಅಗ್ನಿಶಾಮಕದಳದವರು ಸ್ಥಳಕ್ಕೆ ಬಂದಾಗ ಸ್ಥಳೀಯರೇ ಬೆಂಕಿಯನ್ನು ಶಮನಗೊಳಿಸಿದ್ದರು. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಬಿ.ಜಿ. ಡಾಗಾ ಅವರು ತಿಳಿಸಿದ್ದಾರೆ.
ಯಾರೋ ಕಡ್ಡಿ ಕೊರೆದು ಕೋಣೆಯೊಳಗೆ ಹಾಕಿದ್ದರಿಂದ ಆ ಬೆಂಕಿ ಕಚ್ಚಾ ಸಾಮಗ್ರಿಗಳಿಗೆ ಹತ್ತಿ ಉರಿದಿರಬಹುದು ಎಂದು ಅವರು ಶಂಕಿಸಿದರು. ಈ ಕುರಿತು ಪೋಲಿಸ್ ಠಾಣೆಗೆ ದೂರು ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.