ಗೋಡೆ ಕುಸಿದು ೩ ಕಾರ್ಮಿಕರ ಸಾವು

ಥಾಣೆ, ಏ. ೧೭- ಕಾರ್ಖಾನೆಯ ಗೋಡೆ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು ನಾಲ್ವರಿಗೆ ಗಾಯಗೊಂಡ ಘಟನೆ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದ ಪವರ್ ಲೂಮ್ ಕಾರ್ಖಾನೆಯಲ್ಲಿ ನಡೆದಿದೆ.
ನಿನ್ನೆ ಸಂಜೆ ಕಟ್ಟೆ ಪ್ರದೇಶದ ತುಕಾರಾಂ ಕಾಂಪೌಂಡ್‌ನಲ್ಲಿ ಈ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಖಾನೆ ಕಾಂಪೌಂಡ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಗೋಡೆ ಕುಸಿದು ಮೂವರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಹಾನಗರ ಪಾಲಿಕೆ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ಮಿಕರನ್ನು ಮನ್ಸೂಕ್ ಭಾಯ್ (೪೫) ರಾಂಜೋಡ್ ಪ್ರಜಾಪತಿ (೫೦), ಭಾಗವನ್ ಜಾಧವ್ (೫೫) ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.