ಗೋಡೆ ಕುಸಿದು ವೃದ್ಧೆ ಸಾವು

ಬೀದರ:ಸೆ.16: ಮಳೆಯಿಂದಾಗಿ ಗೋಡೆ ಕುಸಿದು 80 ವರ್ಷದ ವೃದ್ದೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಜನವಾಡಾ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಸರ್ಕಾರಿ ಆಸ್ಪತ್ರೆ ಹಿಂದಿರುವ ಬಾಲಾಜಿ ನಗರದಲ್ಲಿನ ಸೇಠು ಎಂಬುವವರ ಮನೆಯಲ್ಲಿ ಮೃತ ಮಹಿಳೆ ಗುರಮ್ಮ ಹಾಗೂ ಆಕೆಯ ಮಗಳು ಲಕ್ಷ್ಮೀ ಬಾಡಿಗೆಯಿಂದ ವಾಸವಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಕಾರಣ, ಅದರಲ್ಲೂ ರಾತ್ರಿ ಭೀಕರ ಮಳೆಯಿಂದಾಗಿ ರಾತ್ರಿ 11.30 ರಿಂದ 1.00 ಗಂಟೆ ಸುಮಾರಿನಲ್ಲಿ ಗೋಡೆ ಕುಸಿದಿದ್ದರಿಂದ ಮಲಗಿದಲ್ಲಿಯೇ ಗುರಮ್ಮ ಶಿವನ ಪಾದ ಸೇರಿದ್ದಾಳೆ. ಆಕೆಯ ಮಗಳು ಲಕ್ಷ್ಮೀಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಜನವಾಡಾ.ಪಿ.ಎಸ್.ಐ ಶಿವರಾಜ ಪಾಟೀಲ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ನಡೆಸಿದ್ದಾರೆ. ಜನವಾಡಾ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.