ಗೋಡಂಬಿ(ಗೇರುಬೀಜ)ಯ ಉಪಯೋಗಗಳು

ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿಕೊಂಡಿರುತ್ತದೆ. ಈ ಗೇರಿನ ಒಳಗಡೆ ಇರುವುದು ಗೇರು ಪೊಪ್ಪು. ಇದನ್ನೇ ನಾವು ಗೋಡಂಬಿ ಎಂದು ಕರೆಯುವುದು. ಇದರ ಮರ, ಬೇರು, ತೊಗಟೆ, ಎಲೆ, ಹೂ, ಹಣ್ಣು, ಎಲ್ಲವೂ ಔಷಧೀಯವಾಗಿ ಬಳಕೆಯಾಗುತ್ತದೆ. ಇದರ ಬೇರು ವಿರೇಚನ ಗುಣವುಳ್ಳದ್ದಾಗಿದ್ದು, ತೊಗಟೆಯಿಂದ ಬರುವ ಕೆಂಪುರಸವು ತುರಿಕೆಯನ್ನು ನಿಲ್ಲಿಸುವ ಶಕ್ತಿಯುಳ್ಳದ್ದಾಗಿದೆ. ಇದು ಹೆಚ್ಚು ಕ್ಯಾಲೋರೀಸ್‌ಗಳನ್ನು ಹೊಂದಿದ್ದು, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಶರೀರಕ್ಕೆ ಒದಗಿಸುವುದಲ್ಲದೆ, ಬಿ ೫, ಬಿ ೬, ಬಿ ೧ ವಿಟಮಿನ್‌ಗಳು ಇದರಲ್ಲಿ ಹೇರಳವಾಗಿವೆ. ಇದು
ಔಷಧೀಯಗಳ ಭಂಡಾರವೇ ಆಗಿದೆ.
೧. ಗೇರುಹಣ್ಣನ್ನು ಆಗಾಗ ಸೇವಿಸುತ್ತಿದ್ದರೆ, ಜಂತುಹುಳುಗಳನ್ನು ನಿಯಂತ್ರಿಸಬಹುದು.
೨. ಚರ್ಮರೋಗ, ಹುಣ್ಣುಗಳು, ಮೂಲವ್ಯಾಧಿ, ಆಮಶಂಕೆ ಇವುಗಳ ನಿವಾರಣೆ ಗೇರುಹಣ್ಣಿನ ಸೇವನೆಯಿಂದ ಸಾಧ್ಯವಾಗುತ್ತದೆ.
೩. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಬರುವಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗುತ್ತದೆ.
೪. ವಸಡಿನಲ್ಲಿ ಉಂಟಾಗುವ ಹುಣ್ಣುಗಳ ನಿವಾರಣೆಗೆ ಈ ಗೇರುಹಣ್ಣನ್ನು ಸಕ್ಕರೆಪಾಕದಲ್ಲಿ ಕುದಿಸಿ ತೆಗೆದಿಟ್ಟುಕೊಂಡು ತಿನ್ನುತ್ತಾ ಬಂದರೆ, ವಸಡಿನ ಹುಣ್ಣು ಗುಣವಾಗುತ್ತದೆ.
೫. ಹೃದಯಕ್ಕೆ ಹಿತಕರ: ಬೇರೆ ಬೀಜಗಳಿಗೆ ಹೋಲಿಸಿದರೆ ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ.
೬. ರಕ್ತದ ಒತ್ತಡಕ್ಕೆ: ಮೆಗ್ನೀಷಿಯಂ ಅಧಿಕವಾಗಿರುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
೭. ಕಪ್ಪುಕೂದಲಿಗೆ: ತಾಮ್ರದ ಅಂಶ ಇದರಲ್ಲಿ ಅಧಿಕವಾಗಿರುವುದರಿಂದ ಕೂದಲಿಗೆ ಕಪ್ಪುಬಣ್ಣವನ್ನು ಒದಗಿಸುತ್ತದೆ.
೮. ಮೂಳೆಗಳಿಗೆ: ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಧಿಕವಾಗಿರುವುದರಿಂದ ಇದರ ನಿರಂತರ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ನರಮಂಡಲವನ್ನು ಜೋಪಾನ ಮಾಡುವುದರ ಮುಖಾಂತರ ರಕ್ತನಾಳಗಳನ್ನು ಹಾಗೂ ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಡುತ್ತದೆ.
೯. ಅರೆತಲೆನೋವಿಗೆ: ಅರೆತಲೆನೋವಿಗೆ ಇದು ಬಹಳ ಉಪಯೋಗಕರ.
೧೦. ಕೊಬ್ಬಿನ ಅಂಶಕ್ಕೆ: ಕೊಬ್ಬಿನ ಅಂಶ ಇದರಲ್ಲಿ ಕಡಿಮೆ ಇರುವುದರಿಂದ ತೂಕ ಹೆಚ್ಚಾಗದಂತೆ ಕಾಪಾಡುತ್ತದೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಜಾಸ್ತಿ ಮಾಡಿ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯಕ್ಕೂ ಸಹ ಒಳ್ಳೆಯದು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧