ಗೋಕರ್ಣ ಕ್ಷೇತ್ರದಲ್ಲಿ ವೀರಶೈವ ಮಠದ ಪುನರುತ್ಥಾನ ತೃಪ್ತಿ ತಂದಿದೆ; ಶ್ರೀ ರಂಭಾಪುರಿ 

ಕುಮಟಾ.ಮಾ.೨೫; ಪವಿತ್ರ ಪುಣ್ಯ ಕ್ಷೇತ್ರದಲ್ಲಿರುವ ಬಾಳೆಹೊನ್ನೂರು ವೀರಶೈವ ಮಠದ ಪರಿಸರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದು  ಉದ್ಘಾಟನೆಗೊಳ್ಳುತ್ತಿರುವುದು ತಮಗೆ ತೃಪ್ತಿ ತಂದಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಗೋಕರ್ಣ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಕಲರ ಶ್ರೇಯೋಭಿವೃದ್ಧಿಯನ್ನು ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಗೋಕರ್ಣ ಕ್ಷೇತ್ರಕ್ಕೂ ವೀರಶೈವ ಧರ್ಮಕ್ಕೂ ನಿಕಟವಾದ ಸಂಬAಧವಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಸದುದ್ದೇಶದಿಂದ ಹುಬ್ಬಳ್ಳಿ ಹನ್ನೆರಡು ಮಠದ ಲಿಂ.ಮಡಿವಾಳ ಶಿವಾಚಾರ್ಯ ಸ್ವಾಮಿಗಳು ವೀರಶೈವ ಮಠವನ್ನು ಸಂಸ್ಥಾಪಿಸಿದ್ದರು. ಶ್ರೀ ಮಠ ಇನ್ನಷ್ಟು ಅಭಿವೃದ್ಧಿಯಾಗಬೇಕೆಂಬ ಸದುದ್ದೇಶದಿಂದ ಇಂದಿನ ರೇವಣಸಿದ್ಧ ಶ್ರೀಗಳು ಮೂಲ ಗುರು ಪೀಠಕ್ಕೆ ಸಮರ್ಪಿಸಿರುವುದೇ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಸಂಕಲ್ಪ ಕೈಗೊಂಡರು. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ, ಶ್ರೀ ಗುರು ಮಡಿವಾಳೇಶ್ವರ ದಾಸೋಹ ಮಂದಿರ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನ ನಿರ್ಮಾಣಗೊಂಡು ಇಂದು ಲೋಕಾರ್ಪಣೆಗೊಳ್ಳುತ್ತಿರುವುದು ಎಲ್ಲ ಭಕ್ತರಿಗೂ ಸಂತೋಷ ತಂದಿದೆ ಎಂದರು.ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ ಗೋಕರ್ಣ ಕ್ಷೇತ್ರದಲ್ಲಿರುವ ವೀರಶೈವ ಮಠವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಿರುವುದು ವೀರಶೈವರಿಗೆ ಗೌರವ ತಂದು ಕೊಟ್ಟಿದೆ. ಜನ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳ ಕಾರ್ಯ ಶ್ಲಾಘನೀಯವಾದುದು. ಗೋಕರ್ಣ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂಬ ಉದ್ದೇಶದಿಂದ ನಾನು ಮುಖ್ಯ ಮಂತ್ರಿ ಆದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿರುವುದು ನನಗೆ ಸಂತೋಷ ತಂದಿದೆ. ಪ್ರವಾಸಿ ಕೇಂದ್ರವಾಗುವುದರ ಜೊತೆಗೆ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಬೆಳೆಸುವ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ ಆಗಬೇಕೆಂದು ಸದಾಶಯ ವ್ಯಕ್ತಪಡಿಸಿದರು. ಗೋಕರ್ಣ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ವಿ.ಜನ್ನು ಮಾತನಾಡಿ ಗೋಕರ್ಣ ಕ್ಷೇತ್ರ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಜೊತೆಗೆ ಧಾರ್ಮಿಕ ನೆಲೆಗಟ್ಟಿನ ಪವಿತ್ರ ಕ್ಷೇತ್ರವಾಗಿ ಬೆಳೆಯುವ ಅವಶ್ಯಕತೆಯಿದೆ. ಸರಿಯಾದ ಅರಿವು ಮತ್ತು ಯೋಜನೆಗಳಿಲ್ಲದ ಕಾರಣ ಆಗಬೇಕಾದಷ್ಟು ಅಭಿವೃದ್ಧಿ ಆಗುತ್ತಿಲ್ಲ. ಸರ್ಕಾರ ಹೆಚ್ಚಿನ ಗಮನ ಹರಿಸುವಂಥ ಅವಶ್ಯಕತೆ ಇದೆಯೆಂದರು.ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ವೀರಶೈವ ಮಠದ ಪುನರುತ್ಥಾನ ವಿಚಾರಗಳನ್ನು ಪ್ರಸ್ತಾಪಿಸಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಸುಳ್ಳ, ಬಂಕಾಪುರ, ಹಲಗೂರು, ಜಕ್ಕಲಿ, ಮಳಲಿಮಠ, ಚಳಗೇರಿ, ಶಾಂತಪುರ, ಸಂಗೊಳ್ಳಿ, ಕಡೆನಂದಿಹಳ್ಳಿ, ಹಂಪಸಾಗರ, ಚನ್ನಗಿರಿ, ಕಾರ್ಜುವಳ್ಳಿ, ಉರವಕೊಂಡ, ಹರಗಿಲದೋಣಿ, ಬರಗಿ, ಹೂಲಿ, ನಂದಿತಾವರೆ ಸೇರಿದಂತೆ 25ಕ್ಕೂ ಹೆಚ್ಚು ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.