ಗೊಲ್ಲ ಸಮುದಾಯ ಮಡಿವಂತಿಕೆಯಿಂದ ಹೊರಬರಲಿ – ಗಾಯತ್ರಿಕೃಷ್ಣ

ಕೂಡ್ಲಿಗಿ, ಜ.10: ಗೊಲ್ಲ ಬುಡಕಟ್ಟು ಸಮುದಾಯವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಹಾಗೆ ಬೌಧಿಕವಾಗಿ ವೈಚಾರಿಕ ಪ್ರಜ್ಞೆ ಹೊಂದಬೇಕು. ಆದರೆ, ಸಂಪ್ರದಾಯ ನಂಬಿಕೆಯಿಂದಾಗಿ ಇಂದಿಗೂ ಮಡಿವಂತಿಕೆಯಂತಹ ಮೌಢ್ಯತೆಯಿಂದ ಕೂಡಿದೆ. ಆ ಮೂಡನಂಬಿಕೆಯ ಆಚರಣೆಗಳಿಂದ ಹೊರಬರಬೇಕು ಎಂದು ಕೂಡ್ಲಿಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಟಿ.ಗಾಯತ್ರಿಕೃಷ್ಣ ನುಡಿದರು.
ತಾಲೂಕಿನ ಇಮಡಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಗೊಲ್ಲ ಸಮುದಾಯದ ಜನಾಂಗಕ್ಕೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಗೊಲ್ಲ ಸಮುದಾಯವು ಸಾಂಸ್ಕೃತಿಕ ಶ್ರೀಮಂತ ಪರಂಪರೆಯ ಆಗರವಾಗಿದೆ. ಅಲ್ಲದೆ ಹಟ್ಟಿಯ ಮಹಿಳೆಯರು ಸಾಂಸ್ಕೃತಿಕ ವೀರರ ಕುರಿತು ದಿನಗಟ್ಟಲೆ ಕಥನ ಕಾವ್ಯಗಳನ್ನು ಹಾಡುವ ಮೂಲಕ ಜಾನಪದ ಕಣಜವಾಗಿದ್ದಾರೆ. ಮೂಡನಂಬಿಕೆಯಂತಹ ಅನಿಷ್ಟ ಪದ್ದತಿಗಳಾದ ಬಾಲ್ಯವಿವಾಹ, ಮುಟ್ಟಿನ ಆಚರಣೆ, ಪ್ರಸವ ಮೈಲಿಗೆ ಇಂತಹ ಆಚರಣೆಯನ್ನು ಕೈಬಿಟ್ಟು ಅಧುನಿಕ ಸ್ಪರ್ಶಕ್ಕೆ ಹೊಂದಿಕೊಂಡು ಹಟ್ಟಿಗಳು ಅಭಿವೃದ್ದಿ ಹೊಂದಬೇಕು ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮುದಾಯ ಮುಖಂಡರು ಶ್ರಮಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಪಾಪತಿ ಮಾತನಾಡಿ, ಗೊಲ್ಲ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಅನೇಕ ಸಾಲಸೌಲಭ್ಯ ಯೋಜನೆಗಳನ್ನು ಸರ್ಕಾರ ರೂಪಿಸಿದೆ ಅಲ್ಲದೆ ಈ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದ್ದು ಇದರ ಪ್ರಯೋಜನ ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಕಾಣಬೇಕು ಹಾಗು ಶಿಕ್ಷಣ ಮತ್ತು ಅಧುನಿಕತೆಗೆ ತೆರದುಕೊಂಡಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದರು.
ಕಾರ್ಯಕ್ರಮವನ್ನು ತಾಪಂ ಸದಸ್ಯ ಗುರುಸಿದ್ದನಗೌಡ ಉದ್ಘಾಟಿಸಿದರು, ನಿವೃತ್ತ ಕೃಷಿಅಧಿಕಾರಿ ಬಾಲಪ್ಪ. ಮುಖಂಡರಾದ ಸಿರಿಯಪ್ಪ, ಸಣ್ಣತಿಮ್ಮಪ್ಪ, ಅಂಗಡಿ ಬಸಣ್ಣ, ಗ್ರಾಪಂ ಸದಸ್ಯರಾದ ತಿಪ್ಪೇಶ್, ಗೋಪಾಲ ಮತ್ತು ನಿಲಯ ಮೇಲ್ವಿಚಾರಕರಾದ ಸಿ.ಅಂಜಿನಪ್ಪ, ಕುಮಾರಸ್ವಾಮಿ, ಎ.ಬಸವರಾಜ, ಮಲ್ಲಪ್ಪ ಬೆಳ್ಳುಂಡಿಗಿ, ಗೋವಿಂದಪ್ಪ, ಮಲ್ಲಿಕಾ, ಮೀನಾಕ್ಷಿಬಾಯಿ, ಹುಲುಗಪ್ಪ, ನಿವೃತ್ತ ಸತ್ಯನಾರಾಯಣ ರೆಡ್ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಹಟ್ಟಿಯ ಮಹಿಳೆಯರು ಜಾನಪದ ಹಾಡುಗಳಾದ ಸೋಬಾನ, ಮದುವೆ, ಒಕ್ಕಲುತನಕ್ಕೆ ಸಂಬಂದಿಸಿ ಹಾಡುಗಳನ್ನು ಹಾಡುವ ಮೂಲಕ ಮೆರುಗು ತಂದರು.