ಗೊಲ್ಲ ಜನಾಂಗದ ಕುಲಶಾಸ್ತ್ರದ ಮರು ಅಧ್ಯಯನಕ್ಕೆ ಒತ್ತಾಯಿಸಿ ಮನವಿ

ಬಳ್ಳಾರಿ, ಮಾ. 24 -ಕರ್ನಾಟಕ ರಾಜ್ಯ ಗಿರಿಜನ ಸಂಸ್ಥೆ 2013ರಲ್ಲಿ ಕೈಗೊಂಡ ಗೊಲ್ಲ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಪರಿಪೂರ್ಣವಾಗಿಲ್ಲ. ಅದಕ್ಕಾಗಿ ಮರು ಅಧ್ಯಯನಕ್ಕೆ ಆದೇಶ ನೀಡಬೇಕೆಂದು ಒತ್ತಾಯ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಇಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಗೊಲ್ಲರ ಸಂಘ ಸಲ್ಲಿಸಿದೆ.
ಮೈಸೂರಿನಲ್ಲಿರುವ ಗಿರಿಜನ ಸಂಶೋಧನಾ ಸಂಸ್ಥೆಯ ನೇತೃತ್ವದಲ್ಲಿ ಗೊಲ್ಲ ಸಮಾಜದ ಬಗ್ಗೆ ನಡೆದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಗಿರಿಜನ ಸಂಶೋಧನಾ ಸಂಸ್ಥೆ ಅಧ್ಯಯನಕ್ಕೆ ಬಳಸಿಕೊಂಡ ಆಧಾರ ಗ್ರಂಥಗಳು ಮೈಸೂರು ಆಡಳಿತಕ್ಕೆ ಕೇಂದ್ರೀಕೃತವಾದವುಗಳಾಗಿವೆ. ಆದರೆ ನಿಜಾಮರು , ಮರಾಠರ ಅಧಿಕಾರಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ನೆಲೆಸಿರುವ ಗೊಲ್ಲ ಸಮುದಾಯದ ಜನಾಂಗದ ಬಗ್ಗೆ ಮಾಹಿತಿ ಪ್ರಕಟವಾಗಿಲ್ಲ ಇಲ್ಲಿನ ಗೊಲ್ಲರು ಕಾಡು, ಬೆಟ್ಟ-ಗುಡ್ಡಗಳಲ್ಲಿ ಪಶುಸಂಗೋಪನೆ ಮಾಡಿಕೊಂಡು ಬದುಕಿದ್ದಾರೆ . ಅದಕ್ಕಾಗಿ ಹಿಂದಿನ ಅಧ್ಯಯನದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಇದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಗೊಲ್ಲರ ಸ್ಥಿತಿಗತಿ ಬಗ್ಗೆ ಮರು ಅಧ್ಯಯನ ಮಾಡಬೇಕಾಗಿದೆ.
ಸಮಾಜದ ಹಿರಿಯರೊಡನೆ ಚರ್ಚಿಸದೆ, ಸಭೆ ಸಂವಾದ ನಡೆಸದೆ ನಡೆಸಿದ ಅಧ್ಯಯನ ಕೈಬಿಟ್ಟು ಈಗ ಹಂಪಿ ಕನ್ನಡ ವಿವಿಯ ಬುಡಕಟ್ಟು ಸಂಸ್ಕೃತಿ ಅಧ್ಯಯನ ಪೀಠದಿಂದ ನಡೆಸಲು ಶಿಫಾರಸು ಮಾಡಬೇಕು. ಅಲೆಮಾರಿ ಅರೆ ಅಲೆಮಾರಿಗಳ ಅಭಿವೃದ್ಧಿಗಾಗಿ ನಿಗಮಕ್ಕೆ 250 ಕೋಟಿ ರೂಪಾಯಿ ಅನುದಾನ ನೀಡಬೇಕು. ಮನೆ ಕಟ್ಟಲು ನೀಡುತ್ತಿರುವ 1.2 ಲಕ್ಷ ರೂ ಅನುದಾನವನ್ನು 5 ಲಕ್ಷ ರೂಗಳ ವರೆಗೆ ಹೆಚ್ಚಿಸಬೇಕು. ಜಿಲ್ಲೆಗೊಂದು ಅಲೆಮಾರಿಗಳ ವಸತಿ ಶಾಲೆ ಆರಂಭಿಸಬೇಕು ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಪಿ.ತಿಮ್ಮಪ್ಪ, ಕಾರ್ಯದರ್ಶಿ ಚಿದಾನಂದಪ್ಪ, ಉಪಾಧ್ಯಕ್ಷ ಕೆ.ಸೋಮಪ್ಪ ಯಾದವ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಿ.ಗಾದೆಪ್ಪ , ವೆಂಕಟೇಶ್ ಡಿ. ಯಾದವ್ , ವೆಂಕಟೇಶ್ವರರಾವ್, ಜಿ. ಸೋಮರೆಡ್ಡಿ, ವೈ.ರಂಗಪ್ಪ, ಬಿ.ಬಸವರೆಡ್ಡಿ , ಗೋಪಾಲ್ ಶೆರೆಗಾರ ಮತ್ತಿತರರು ಉಪಸ್ಥಿತರಿದ್ದರು