ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ: ತಹಶೀಲ್ದಾರ್ ಭರವಸೆ

ಕೊರಟಗೆರೆ, ಆ. ೨೯- ಕಾಡುಗೊಲ್ಲ ಜನಾಂಗದ ಗೊಲ್ಲರಹಟ್ಟಿಗಳಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾಡುಗೊಲ್ಲರ ಜನರಲ್ಲಿರುವ ಮೂಢ ನಂಬಿಕೆಗಳ ಅರಿವು ಕಾರ್ಯಕ್ರಮದ ಜತೆಗೆ ಸರ್ಕಾರದಿಂದ ದೊರೆಯಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಎಂದು ತಹಶೀಲ್ದಾರ್ ಮುನಿಶಾಮಿರೆಡ್ಡಿ ಹೇಳಿದರು.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕಾಡುಗೊಲ್ಲ ಜನಾಂಗದ ಕಲ್ಯಾಣಕ್ಕಾಗಿ ಸುಮಾರು ೧೫ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಾನೂನು ಪ್ರಾಧಿಕಾರದ ಸಹಯೋಗದಲ್ಲಿ ಮೌಢ್ಯತೆ ಹಾಗೂ ಮೂಡನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಡುಗೊಲ್ಲ ಸಮುದಾಯಕ್ಕೆ ಜನಸಾಮಾನ್ಯರಿಗೆ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಅಯೋಜಿಸಿದ್ದು ತಾಲ್ಲೂಕಿನ ೨೫ ಗೊಲ್ಲಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಪ್ರತಿ ಕುಟುಂಬಗಳು ಅಭಿವೃದ್ಧಿಯಾಗುವಂತಹ ಕಾರ್ಯಕ್ರಮಗಳನ್ನು ತಾಲ್ಲೂಕಿನ ಎಲ್ಲ ಇಲಾಖೆಯ ನೇತೃತ್ವದಲ್ಲಿ ಮಾಡುತ್ತೇವೆ ಹಾಗೂ ಗೊಲ್ಲರಹಟ್ಟಿಗಳಲ್ಲಿ ಅತಿ ಹೆಚ್ಚು ಗುಡಿಸಲುಗಳಿದ್ದು ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾ.ಪಂ.ವ್ಯಾಪ್ತಿಯ ಮಹಾಲಿಂಗನಹಟ್ಟಿ, ಗೋವರ್ಧನಗಿರಿ, ಬೂದುಗವಿ ಗ್ರಾ.ಪಂ.ವ್ಯಾಪ್ತಿಯ ಗೌರಿ ಕಲ್ಲು ಗೊಲ್ಲರಹಟ್ಟಿ, ತೋವಿನಕೆರೆ ಗ್ರಾ.ಪಂ.ವ್ಯಾಪ್ತಿಯ ಕಬ್ಬಿಗ್ಗೆರೆ, ಬಿಸಾಡಿಹಳ್ಳಿ, ಮುದ್ದೇಗೌಡನಹಳ್ಳಿ, ಡಿ.ಎಸ್.ಜಿ.ಪಾಳ್ಯ, ಚಿಕ್ಕರಸನಹಳ್ಳಿ, ಕಲ್ಲು ವೀರಯ್ಯನ ಹಟ್ಟಿ, ಬೋರೆಯ್ಯನ ಹಟ್ಟಿ ಸೇರಿದಂತೆ ಸುಮಾರು ೧೫ ಕಾಡುಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಗೋಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ದಿ ಅಧಿಕಾರಿ ಅಂಬಿಕಾ ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ ಮೌಲ್ಯಗಳು ಹಾಗೂ ಮೂಢ ನಂಬಿಕೆಗಳಿಂದ ಹೊರಬಂದು ಸುರಕ್ಷಿತವಾಗಿ ತಮ್ಮ ಜೀವನ ಸಾಗಿಸುವುದರ ಜತೆಗೆ ತಮ್ಮ ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮನೆಯ ಸುತ್ತಮುತ್ತ ಶುಚಿಯಾಗಿಟ್ಟುಕೊಳ್ಳಬೇಕು, ಉತ್ತಮ ಆಹಾರ ಸೇವಿಸಿದಾಗ ತಾಯಿ ಮಗು ಆರೋಗ್ಯದಿಂದ ಇರುಲು ಸಾಧ್ಯ ಎಂದರು.
ಭೇಟಿ ನೀಡಿದ ಎಲ್ಲ ಗೊಲ್ಲರಹಟ್ಟಿಗಳಲ್ಲಿನ ಕೊಳಚೆ ಚರಂಡಿ, ರಸ್ತೆ, ನೀರಿನ ಟ್ಯಾಂಕ್ ಸುತ್ತಲಿನ ಕೊಳಚೆಯನ್ನು ಕಂಡು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ತಕ್ಷಣ ಗ್ರಾ.ಪಂ. ವ್ಯಾಪ್ತಿಯ ಗೊಲ್ಲರಹಟ್ಟಿ ಸೇರಿದಂತೆ ಎಲ್ಲ ಗ್ರಾಮಗಳಲ್ಲೂ ಶುಚಿತ್ವಗೋಳಿಸಬೇಕೆಂದು ಎಚ್ಚರಿಕೆ ನೀಡಿದ ತಹಶೀಲ್ದಾರ್, ಗೊಲ್ಲರಹಟ್ಟಿ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾಲ್ಲೂಕಿನ ಹಲವು ಇಲಾಖಾಧಿಕಾರಿಗಳು ಬೇಜವಾಬ್ದಾರಿತನದಿಂದ ಗೈರು ಹಾಜರಾಗಿರುವುದನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಅನಂತರಾಜು, ತಾಲ್ಲೂಕು ವೈದ್ಯಾಧಿಕಾರಿ ವಿಜಯ್‌ಕುಮಾರ್, ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಲಕ್ಷ್ಮಿನಾರಾಯಣ್, ಕಂದಾಯ ಇಲಾಖೆ ನೀರೀಕ್ಷಕ ರಮೇಶ್, ತೋವಿನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ, ರಾಮಕೃಷ್ಣಪ್ಪ, ರಮೇಶ್, ಪುಟ್ಟರಾಜ್, ಕಾಡುಗೊಲ್ಲ ಸಮುದಾಯದ ತಾಲ್ಲೂಕು ಅಧ್ಯಕ್ಷ ಮುತ್ತುರಾಜ್, ಚಿಕ್ಕೇಗೌಡನಹಳ್ಳಿ ಸಿರಿ ಖ್ಯಾತಿಯ ಮಂಜುಳಾ, ಪತ್ರಕರ್ತ ಪದ್ಮನಾಭ್, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ಕರ್ನಾಟಕ ರಣಧೀರ ವೇದಿಕೆಯ ಮಂಜುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.