ಗೊಲ್ಲರಹಟ್ಟಿಗಳಲ್ಲಿ ಕಂದಾಚಾರ ಕೊನೆಗಾಣಬೇಕು: ದಾಸಪ್ಪ

ಮಧುಗಿರಿ, ಜ. ೯- ಜಿಲ್ಲಾ ಪಂಚಾಯಿತ್ ತುಮಕೂರು ಹಾಗೂ ಶ್ರೀ ದೇವರಾಜು ಅರಸು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ೨೦೨೦-೨೧ ನೇ ಸಾಲಿನ ಅಲೆಮಾರಿ/ಅರೆ ಅಲೆಮಾರಿ ಕಾಲೋನಿಗಳಲ್ಲಿ ಗೊಲ್ಲ ಹಾಗೂ ಇತರೆ ಅಲೆಮಾರಿ ಸಮುಯದಾಯವರಿಗೆ
ಮೂಢನಂಬಿಕೆ ಕಂದಾಚಾರಗಳನ್ನು ಹೋಗಲಾಡಿಸಲು ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ತಾಲ್ಲೂಕಿನ ಸಿದ್ದಾಪುರ ಗೊಲ್ಲರಹಟ್ಟಿಯಲ್ಲಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಬಿ.ಆರ್.ಸಿ. ಎಲ್.ಟಿ. ದಾಸಪ್ಪ ಮಾತನಾಡಿ, ಗೊಲ್ಲ ಸಮುದಾಯದ ಕಾಲೋನಿಗಳಲ್ಲಿ ಹೆಣ್ಣುಮಕ್ಕಳ ಹೆರಿಗೆ ಹಾಗೂ ಮಾಸಿಕ ಋತು ಚಕ್ರದ ಸಂದರ್ಭದಲ್ಲಿ ಗೊಲ್ಲರಹಟ್ಟಿಯಿಂದ ದೂರವಿಡುವ ಪದ್ದತಿಯನ್ನು ಕೈ ಬಿಡಬೇಕು ಹಾಗೂ ಹಟ್ಟಿಗಳಲ್ಲಿ ಹೆಚ್ಚಾಗಿ ವಾಸಿಸುವ ಕಾಲೋನಿಗಳಲ್ಲಿ ಕಂದಾಚಾರಗಳು ಇರುವ ಪದ್ದತಿಯನ್ನು ಕೊನೆಗಾಣಿಸಬೇಕು ಎಂದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಇದೇ ಸಂದರ್ಭದಲ್ಲಿ ಅರಿವು ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರಾದ ಮೂಡ್ಲಿಗಿರೀಶ್ ಮಾತನಾಡಿ, ಅಲೆಮಾರಿ, ಅರೆ ಅಲೆಮಾರಿ ಜನಾಂದವರಿಗೆ ಗಂಗಾಕಲ್ಯಾಣ ಯೋಜನೆ ಪ್ರಯೋಜನ, ಶೈಕ್ಷಣಿಕ ಸಾಲದ ಯೋಜನೆ, ಉನ್ನತ ವ್ಯಾಸಂಗ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲ ಮತ್ತು ಸಹಾಯ ಯೋಜನೆ ಇಲಾಖೆಗಳಿಂದ ದೊರೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ ವಹಿಸಿದ್ದರು.
ಸಮಾರಂಭದಲ್ಲಿ ಆಡಳಿತಾಧಿಕಾರಿಯಾದ ವಾಸುದೇವಮೂರ್ತಿ, ಸಿಡಿಪಿಒ ಅನಿತಾ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ದಾಪುರ ವೀರಣ್ಣ, ರಾಜ್‌ಗೋಪಾಲ್, ಮಾಲತಿ ಲೋಕೇಶ್, ಪದ್ಮಾವತಿ, ಅಲುವೇಲಮ್ಮ ಹಾಗೂ ಪಿಡಿಒ ಗೌಡಪ್ಪ, ಚಿತ್ತಯ್ಯ, ತಾಲ್ಲೂಕು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಮಹಮದ್ ಷಫಿವುಲ್ಲಾ, ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿಗಳಾದ ಜಯರಾಂ, ರಾಮ್‌ಮೋಹನ್, ಸಣ್ಣಪ್ಪ, ರವಿ, ಅರುಣ್ ಕುಮಾರ್, ಅಕ್ಕಮ್ಮ, ಲಕ್ಷ್ಮೀರಂಗನಾಥ ಮತ್ತಿತರರು ಉಪಸ್ಥಿತರಿದ್ದರು.