ಗೊರಿಲ್ಲಾಗೂ ಕೊರೊನಾ

ಸ್ಯಾನ್ ಡಿಯಾಗೋ, ಜ.೧೨- ಮನುಕುಲಕ್ಕೆ ಕಾಡುತ್ತಿದ್ದ ಕೊರೋನಾ ಸೋಂಕಿನ ಭೀತಿ ಇದೀಗ ಪ್ರಾಣಿಗಳಲ್ಲೂ ಕಾಣಲು ಆರಂಭಿಸಿದ್ದು, ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನ ಹಲವು ಗೊರಿಲ್ಲಾಗಳಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ವಾನರ ಪ್ರಭೇದದಲ್ಲಿ ಸೋಂಕು ಕಂಡು ಬಂದಿದೆ.
ರೋಗಲಕ್ಷಣವಿಲ್ಲದ ಮೃಗಾಲಯದ ಸಿಬ್ಬಂದಿಯಿಂದ ಗೊರಿಲ್ಲಾಗಳಿಗೆ ಸೋಂಕು ಹರಡಿದೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ

ಇನ್ನು ಈ ಕುರಿತು ಹೇಳಿಕೆ ನೀಡಿರುವ ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಲಿಸಾ ಪೀಟರ್ಸನ್, ಶೀತ ಮತ್ತು ಕೆಮ್ಮಿನ ಹೊರತಾಗಿ, ಗೊರಿಲ್ಲಾಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ.

ಮೂರು ಪ್ರಾಣಿಗಳಲ್ಲಿ ಮಾತ್ರ ಕೆಮ್ಮುವಿಕೆಯಂತಹ ಲಕ್ಷಣ ಕಂಡುಬಂದಿದೆ. ಆದರೆ, ಗೊರಿಲ್ಲಾ ಪ್ರಾಣಿಗಳು ಒಟ್ಟಿಗೆ ವಾಸಿಸುತ್ತಿರುವುದರಿಂದ ಗುಂಪಿನ ಎಲ್ಲ ಪ್ರಾಣಿಗಳಿಗೂ ಹಬ್ಬಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಮಧ್ಯ ಆಫ್ರಿಕಾದಲ್ಲಿ ಕಂಡುಬರುವ ಈ ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳ ಸಂಖ್ಯೆ ಕಳೆದ ಎರಡು ದಶಕಗಳಲ್ಲಿ ಶೇ.೬೦ ಕ್ಕಿಂತಲೂ ಕಡಿಮೆಯಾಗಿದೆ.ಸೋಂಕಿಗೆ ಒಳಗಾಗಿರುವ ಎಂಟು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳ ಆರೋಗ್ಯವನ್ನು ಪಶುವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.