ಗೊಜನೂರ: ಮತದಾರರ ಜಾಗೃತಿ ಶಿಬಿರ

ಲಕ್ಷ್ಮೇಶ್ವರ,ಏ 8: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು, ಪುರುಷರು ಎಂಬ ಭೇದವಿಲ್ಲ. ಅದೇ ರೀತಿ ಸಂವಿಧಾನವು ಎಲ್ಲರಿಗೂ ಸಮಾನ ಮತದಾನ ಹಕ್ಕನ್ನು ನೀಡಿದ್ದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸುಶೀಲಾ ಹೇಳಿದರು.
ತಾಲ್ಲೂಕಿನ ಗೊಜನೂರ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ. ಶೇ.100ರಷ್ಟು ಮತದಾನ ಮಾಡುವುದರಿಂದ ಸದೃಢ ಪ್ರಜಾಪ್ರಭುತ್ವ ದೇಶ ಕಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ಸಂವಿಧಾನ ನಿಡಿದ ಮತದಾನದ ಹಕ್ಕೆನ್ನು ತಪ್ಪದೇ ಚಲಾಯಿಸಬೇಕು. ಮೇ 10ರಂದು ಮತದಾನ ನಡೆಯಲಿದ್ದು ಒತ್ತಡಗಳನ್ನು ಬದಿಗೊತ್ತಿ ಮತದಾನದಲ್ಲಿ ಪಾಲ್ಗೊಳ್ಳಿ. ಯಾವುದೇ ಆಮಿಷಗಳಿಗೆ ಮರುಳಾಗಬೇಡಿ' ಎಂದು ಮನವಿ ಮಾಡಿದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ ಬಡಿಗೇರ ಮಾತನಾಡಿಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಕೂಲಿಕಾರರಿಗೂ ದಿನಕ್ಕೆ 316 ರೂಪಾಯಿ ನೀಡಲಾಗುತ್ತಿದೆ. ಅಲ್ಲದೆ ನಿರಂತರ ಕೆಲಸ ಒದಗಿಸಲಾಗುತ್ತಿದ್ದು ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. 18 ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣ ತೀರಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು. ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು’ ಎಂದು ಸಲಹೆ ಮಾಡಿದರು.
ತಾಲ್ಲೂಕು ಪಂಚಾಯ್ತಿಯ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪಂಚಾಯ್ತಿಯ ಸಹಾಯಕ ಕಾರ್ಯದರ್ಶಿ ಎಸ್.ಎಸ್. ಕಲ್ಮನಿ, ತಹಶೀಲ್ದಾರ ಕೆ.ಆನಂದ ಶೀಲ್, ತಾಲ್ಲೂಕು ಪಂಚಾಯ್ತಿ ನರೇಗಾದ ಸಹಾಯಕ ನಿರ್ದೇಶಕ ಕೃಷ್ಣಾ ಧರ್ಮರ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮಾಳವಾಡ, ಕಾರ್ಯದರ್ಶಿ ಎಸ್.ಬಿ. ಮೇಟಿ, ಮುತ್ತು ಸಜ್ಜನ, ಚಂದ್ರಶೇಖರ ಹಳ್ಳಿ, ಅರುಣಕುಮಾರ ತಂಬ್ರಳ್ಳಿ, ಪ್ರದೀಪ ನರೇಗಲ್ಲ, ಸತೀಶ ಅರಿಷಿಣದ, ತಿಕರಪ್ಪ ಬಾಲೆಹೊಸೂರ ಇದ್ದರು.
ಗೊಜನೂರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಿಂದ ಗ್ರಾಮ ಪಂಚಾಯತಿ ಕಚೇರಿ ಮಾರ್ಗವಾಗಿ ಮೂಲಿಮನಿ ಅವರ ಜಮೀನಿನವರೆಗೂ ಮತದಾರರ ಜಾಗೃತಿ ಜಾಥಾ ಜರುಗಿತು. ಕೂಲಿಕಾರ್ಮಿಕರು ಸಲಕಿ, ಬುಟ್ಟಿಗಳನ್ನು ಹೊತ್ತು `ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ, ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ. ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ’ ಎಂಬ ಘೋಷಣೆಗಳನ್ನು ಕೂಗಿದುದುವಿಶೇಷವಾಗಿತ್ತು.