ಗೊಂದಲ ಗೂಡಾದ ಪುರಸಭೆ ಬಜೆಟ್ ಸಭೆ: ಮುಂದೂಡಿಕೆ

ಗುಳೇದಗುಡ್ಡ ಜೂ.10- ಪಟ್ಟಣದ ಅಭಿವೃದ್ಧಿಗಾಗಿ ಸಿದ್ದಪಡಿಸಲಾಗಿರುವ 2021-22ನೇ ಸಾಲಿನ ಗುಳೇದಗುಡ್ಡ ಪುರಸಭೆ ಕರಡು ಆಯ-ವ್ಯಯದ ಅಂದಾಜು ಪಟ್ಟಿ ಅವೈಜ್ಞಾನಿಕವಾಗಿ ಕೂಡಿದ್ದೂ, ಇದರ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ ಪುರಸಭೆಯ ವಿರೋಧ ಪಕ್ಷದ ಹಾಗೂ ಆಡಳಿತ ಪಕ್ಷದ ಕೆಲ ಸದಸ್ಯರು ಬಜೆಟ್ ಸಭೆಯನ್ನು ಮುಂದೂಡುವಂತೆ ತೀವ್ರ ಆಕ್ರೋಶ ಪಡಿಸಿದ ಹಿನ್ನೆಲೆಯಲಿ ಸಭೆಯನ್ನು ಮುಂಡೂಡಲಾಯಿತು.
ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಚಿದಾನಂದ ಮಠಪತಿ ಅವರು ಬಜೆಟ್ ಸಭೆಯನ್ನು ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರಾದ ಪ್ರಶಾಂತ ಜವಳಿ, ಸಂತೋಷ ನಾಯನೇಗಲಿ, ಉಮೇಶ ಹುನಗುಂದ ಅಲ್ಲದೇ ಬಹು ಮುಖ್ಯವಾಗಿ ಆಡಳಿತ ಪಕ್ಷದ ಸದಸ್ಯರಾದ ರಾಜಶೇಖರ ಹೆಬ್ಬಳ್ಳಿ ಅವರು, ಮುಖ್ಯಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಪ್ರಸಕ್ತ ಸಾಲಿನ ಆಯ-ವ್ಯಯ ಪತ್ರಿಕೆ ಪೂರ್ವಭಾವಿ ಸಭೆಗೆ ಸದಸ್ಯರನ್ನು ಕರೆದಿಲ್ಲ. ಸಭೆಯ ಬಗ್ಗೆ ಪುರಸಭೆ ಸದಸ್ಯರಿಗೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಕೊಟ್ಟಿಲ್ಲ. ಅಲ್ಲದೇ ಪಟ್ಟಣದ ಅಭಿವೃದ್ಧಿಗಾಗಿ ಈಗ ಸಿದ್ದಪಡಿಸಲಾಗಿರುವ 2021-22ನೇ ಸಾಲಿನ ಕರಡು ಆಯ-ವ್ಯಯ ಅಂದಾಜು ಪಟ್ಟಿಯಲ್ಲಿನ ಅಂಕಿ ಅಂಶಗಳು ಅವೈಜ್ಞಾನಿಕದಿಂದ ಕೂಡಿವೆ. ಕಾರಣ ಬಜೆಟ್ ಸಭೆಯನ್ನು ಮುಂದೂಡುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರಿಗೆ ಒತ್ತಾಯಿಸಿದರು.
ಆಯ-ವ್ಯಯದ ಕರಡು ಪ್ರತಿಗೆ ಮುಖ್ಯಾಧಿಕಾರಿ, ಅಧ್ಯಕ್ಷರ ಹಾಗೂ ಲೆಕ್ಕಾಧಿಕಾರಿಗಳ ಸಹಿ ಇಲ್ಲ, ಇದು ಅಧಿಕಾರಿಗಳ ಬೇಜವಾಬ್ದಾರಿತನ ಏತ್ತಿ ತೋರಿಸುತ್ತದೆ ಎಂದ ಕೆಲ ಸದಸ್ಯರು, ಇಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದ ಸದಸ್ಯರು ಆಕ್ರೋಶಭರಿತವಾಗಿ ಮಾತಿನ ಚಕಮಕಿ ನಡೆಸಿದರು. ಆಡಳಿತ ಪಕ್ಷ ಸದಸ್ಯರಾದ ರಾಜಶೇಖರ ಹೆಬ್ಬಳಿ ಅಧಿಕಾರಿಗಳ ವಿರುದ್ಧ ಗರಂ ಆದರು. ನಂತರ ಮಾತನಾಡಿದ ಸದಸ್ಯರಾದ ರಾಜಶೇಖರ ಹೆಬ್ಬಳಿ ಅವರು, ಈ ಸಭೆಗೆ ನಮ್ಮದು ಸಂಪೂರ್ಣ ವಿರೋದ ಇದೆ. ಕಾರಣ ಅಧ್ಯಕ್ಷರಲ್ಲಿ ಮನವಿ ಮಾಡಿ, ಬಜೆಟ್‍ನ ಅಂಕಿ ಅಂಶಗಳ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ಬಜೆಟ್ ಸಭೆಯನ್ನು ಇನ್ನೊಂದು ದಿನಾಂಕಕ್ಕೆ ನಿಗಧಿ ಮಾಡಿ ಸಭೆಯನ್ನು ಮುಂದೂಡಬೇಕೆಂದು ಸದಸ್ಯರು ಪಟ್ಟು ಹಿಡಿದರು.
ಸದಸ್ಯರಾದ ರಾಜಶೇಖರ ಹೆಬ್ಬಳ್ಳಿ, ಸಂತೋಷ ನಾಯನೇಗಲಿ ಸೇರಿದಂತೆ ಕೆಲ ಸದಸ್ಯರು ಬಜೆಟ್ ಸಭೆಯ ಬಗ್ಗೆ ಪರ ಮತ್ತು ವಿರೋದವಾಗಿ ಪ್ರೋಸಿಡಿಂಗ ಬರೆದು ಸಹಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಆಗ ಮಧ್ಯೆದಲ್ಲಿ ಸದಸ್ಯ ವಿಠ್ಠಲ ಕಾವಡೆ ಅವರು ಮಾತನಾಡಿ, ನಾವು ಪರ ಮತ್ತು ವಿರೋಧವಾಗಿ ಸಹಿ ಮಾಡುವುದಿಲ್ಲ ಎಂದರು. ಆಗ ಸದಸ್ಯರಾದ ಉಮೇಶ ಹುನಗುಂದ, ಪ್ರಶಾಂತ ಜವಳಿ ಅವರು ನಾವು ಸಭೆಯ ಪ್ರೋಸಿಡಿಂಗ ವಿರುದ್ಧವಾಗಿ ಸಹಿ ಮಾಡುತ್ತೆವೆ. ನೀವು ಪರವಾಗಿ ಮಾಡಿ ಅಥವಾ ಬಿಡಿ ಅದು ನಿಮಗೆ ಬಿಟ್ಟಿದ್ದು ಎಂದು ಹೇಳಿದರು. ಈ ಹಗ್ಗಜಗ್ಗಾಟದ ನಡುವೆ ಅಧಿಕಾರಿಗಳು ಪ್ರೋಸಿಡಿಂಗ ಬರೆದಾಗ ಹಾಜರಿದ್ದ 19 ಸದಸ್ಯರ ಸಂಖ್ಯೆಯಲ್ಲಿ ವಿರೋಧ ಪಕ್ಷದವರಲ್ಲದೇ ಆಡಳಿತ ರೂಢ ಪಕ್ಷದ ಸದಸ್ಯರಾದ ವಿದ್ಯಾ ಪ್ರಕಾಶ ಮುರಗೋಡ, ರಾಜಶೇಖರ ಹೆಬ್ಬಳ್ಳಿ, ರಾಜವ್ವ ಹೆಬ್ಬಳ್ಳಿ, ಅವರನ್ನೊಳಗೊಂಡ ಒಟ್ಟು 10 ಜನ ಸದಸ್ಯರು ಪ್ರೊಸಿಡಿಂಗ್‍ಗೆ ಸಹಿ ಮಾಡಿದರು. ಇನ್ನೂ ಉಳಿದ 9 ಜನ ಸದಸ್ಯರಲ್ಲಿ ಪರ ಅಥವಾ ವಿರೋಧ ಇಲ್ಲದೇ ತಟಸ್ಥರಾಗಿ ಉಳಿದರು. ಸದಸ್ಯ ಅಮರೇಶ ಕವಡಿಮಟ್ಟಿ ಸೂಚಿಸಿದರು. ಸಂತೋಷ ನಾಯನೇಗಲಿ ಅನೊಮೋದಕರಾಗಿ ಸಹಿ ಮಾಡಿದರು. ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ರೂಡ ಪಕ್ಷದ ಸದಸ್ಯರೇ ಗೈರು : ಬಜೆಟ್ ಸಭೆ ಪ್ರೊಸಿಡಿಂಗ್ ಪಾಸ್ ಮಾಡಲು ಅಗತ್ಯವಾದ ಸಂಖ್ಯೆಗೆ ಆಡಳಿತ ಪಕ್ಷದವವರ ಕೆಲ ಸದಸ್ಯರು ಗೈರಾಗಿದ್ದು, ಆಡಳಿಯ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಪುರಸಭೆ ಕಾರ್ಯಲಯದಲ್ಲಿ ಜರುಗಿದ ಬಜೆಟ್‍ನ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾದ ರಫೀಕ್ ಕಲಬುರ್ಗಿ, ಉಪಾಧ್ಯಕ್ಷೆ ಶರೀಪಾ ಮಂಗಳೂರು, ಹನಮಂತ ಗೌಡ್ರ, ಜ್ಯೋತಿ ಆಲೂರ ಅವರನ್ನೊಳಗೊಂಡ ನಾಲ್ಕು ಸದಸ್ಯರು ಗೈರಾಗಿದ್ದು, ಜೊತೆಗೆ ಆಡಳಿತ ಪಕ್ಷದ ಸದಸ್ಯರಾದ ರಾಜಶೇಖರ ಹೆಬ್ಬಳ್ಳಿ, ರಾಜವ್ವ ಹೆಬ್ಬಳ್ಳಿ, ವಿದ್ಯಾ ಪ್ರಕಾಶ ಮುರಗೋಡ ಅವರು ಸಹ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದು ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಆಡಳಿತ ಪಕ್ಷಕ್ಕೆ ಇದರಿಂದ ತೀವ್ರ ಮುಜುಗರ ಉಂಟು ಮಾಡಿದೆ ಎನ್ನಬಹುದು. ಆಡಳಿತ ಪಕ್ಷದ ಸದಸ್ಯರ ಗೈರು ವಿರೋಧ ಪಕ್ಷದ ಸದಸ್ಯರಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.