ಗೊಂದಲದಲ್ಲಿ ಮುಕ್ತಾಯಗೊಂಡ ಡಿಸಿ ಸಭೆ 

ದಾವಣಗೆರೆ. ಮಾ.೧೪: ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಕುಕ್ಕುವಾಡ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆ ಗೊಂದಲದಲ್ಲಿ ಮುಕ್ತಾಯವಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕರೆದಿದ್ದ ಸಭೆಗೆ ರೈತರನ್ನು ಮತ್ತು ಕಾರ್ಖಾನೆಯ ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಆಹ್ವಾನಿಸಲಾಗಿತ್ತು.ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಕರೆದಿದ್ದ ಸಭೆಗೆ ಕಾರ್ಖಾನೆಯ ಎಂ ಡಿ ಎಸ್ ಎಸ್ ಗಣೇಶ್ 1 ಗಂಟೆ ಮುಂಚಿತವಾಗಿ ಆಗಮಿಸಿ ಒಳಗಡೆ ಕುಳಿತ್ತಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರು ಸಮಯಕ್ಕೆ ಸರಿಯಾಗಿ ಬಂದು ಕಾದರು. ಡಿ ಸಿ ಮತ್ತು ಎಸ್ ಪಿ ಸುಮಾರು 4.15ಕ್ಕೆ ಬಂದು ಸೀದಾ ಗಣೇಶ ಇದ್ದ ಕಚೇರಿಗೆ ಹೋದರು. ಹೊರಗಡೆ ಇದ್ದ ರೈತರನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇರುವಂತೆ ಪೊಲೀಸರ ಮೂಲಕ ಹೇಳಿ ಕಳುಹಿಸಿದರು.ಇದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.ನಂತರ ಕಾರ್ಖಾನೆಯಿಂದ ಹೊರಗಡೆ ಬಂದು ಸೀದಾ ಗ್ರಾಮ ಪಂಚಾಯಿತಿ ಕಚೇರಿಗೆ ಹೋದರು.ಆಕ್ರೋಶಗೊಂಡ ರೈತರು ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ನಿಂತಿದ್ದ ಅವರ ಕಾರು ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟಿಸಿದರು.ನಂತರ ಅವರ ಕಾರಿನ ಮುಂದೆ ನೆಲದ ಮೇಲೆ ಕುಳಿತಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಪಾಸಿಯವರು ಕಾರ್ಖಾನೆಯ ಒಳಗಡೆ ಪರಿಶೀಲಿಸಿದ್ದೇನೆ. ಬೂದಿ ಮತ್ತು ತ್ಯಾಜ್ಯ ನೀರನ್ನು ಬಿಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.ಆಗ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಒಕ್ಕೂಟದ ಮುಖಂಡ ಬಿ ಎಂ ಸತೀಶ್ ಕೊಳೇನಹಳ್ಳಿ ಮಾತನಾಡಿ, ರೈತರ ಮತ್ತು ಕಾರ್ಖಾನೆಯವರ ಸಭೆಯನ್ನು ಕರೆದಿರುವುದಾಗಿ ಹೇಳಿದ್ದೀರಿ. ಆದರೆ ಈಗ ಕಾರ್ಖಾನೆಯವರೊಂದಿಗೆ ಪ್ರತ್ಯೇಕವಾಗಿ ಒಳಗಡೆ ಮಾತನಾಡಿಕೊಂಡು ಬಂದು ಈಗ ರೈತರೊಂದಿಗೆ ಮಾತನಾಡುತ್ತಿದ್ದೀರಿ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಗ ಡಿ ಸಿ ಯವರು ನಾನು ಕಾರ್ಖಾನೆಯ ಒಳಗಡೆ ನಿಮ್ಮ ಬೇಡಿಕೆಗಳಾನುಸಾರ ಪರಿಶೀಲನೆಗೆ ಹೋಗಿದ್ದೆ. ಕಾರ್ಖಾನೆ ಚಿಮಣಿ ಮೂಲಕ ಹೊರಸೂಸುವ ಬೂದಿಯಿಂದ ವಾಯು ಮಾಲಿನ್ಯ ಮತ್ತು ಹಳ್ಳಕ್ಕೆ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯ ನೀರಿನಿಂದ ಜಲ ಮಾಲಿನ್ಯವಾಗಿರುವುದು ಸತ್ಯ. ಇವರೆಲ್ಲ ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮವಹಿಸುತ್ತೇನೆ. ಇದರ ಜವಾಬ್ದಾರಿ ನನ್ನದು. ಇನ್ನುಳಿದ ಕ್ರಮ ಸಂಖ್ಯೆ 3 ರಿಂದ 9 ಬೇಡಿಕೆಗಳನ್ನು ಸಕ್ಕರೆ ಆಯುಕ್ತರೊಂದಿಗೆ ಮಾತನಾಡಿ ಕ್ರಮವಹಿಸುವಂತೆ ಕೋರುವೆ ಎಂದು ಹೇಳಿದಾಗ ಪ್ರತಿಭಟನಾಕಾರರು ಒಪ್ಪಲಿಲ್ಲ.ನಂತರ ಸಕ್ಕರೆ ಆಯುಕ್ತರ, ಸಕ್ಕರೆ ಕಾರ್ಖಾನೆಯವರ ಮತ್ತು ರೈತರ ಸಭೆಯನ್ನು ಡಿ ಸಿ ಕಚೇರಿಯಲ್ಲಿ ಅತಿ ಶೀಘ್ರದಲ್ಲೇ ನಡೆಸಲಾಗುವುದು ಎಂದು ನುಣುಚಿಕೊಂಡು ಸಭೆ ನಡೆಸದೆ ತೆರಳಿದರು.