ಗೊಂದಲಗಳ ಮಧ್ಯೆ ಮಾಲಾವಿಸರ್ಜನೆ

ಹೊಸಪೇ‌ಟೆ ಡಿ 28 : ತಿಂಗಳು, ವಾರಗಟ್ಟಲೆ ಭಕ್ತಿಯಿಂದ ನಡೆಸಿ ಆಚರಿಸಿದ ಹನುಮಮಾಲಾ ವ್ರತವು ಭಾನುವಾರ ಕೊನೆಗೊಂಡಿದ್ದು, ಕೋವಿಡ್19 ಹಾಗೂ ಚಿರತೆ ಹಾವಳಿ ಪರಿಣಾಮದಿಂದಾಗಿ ಕೆಲ ಮಾಲಾಧಾರಿಗಳು ಆಂಜನಾದ್ರಿ ದೇವಸ್ಥಾನದ ಪರ್ಯಾಯವಾಗಿ ಹತ್ತಿರದ ದೇವಸ್ಥಾನಗಳಲ್ಲಿ ಮಾಲಾವಿಸರ್ಜನೆ ಮಾಡಿದ್ದಾರೆ.
ವರ್ಷದ ಆರಂಭದಿಂದ ಇದ್ದ ಕೋವಿಡ್19 ಸಾಂಕ್ರಮಿಕ ಹಿನ್ನಲೆಯಲ್ಲಿ ಸರ್ಕಾರವು ದೇವಾಲಯಗಳ ದರ್ಶನ ಹಾಗೂ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ನಂತರ ಹಂತಹಂತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಗಂಗಾವತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ಹಿನ್ನಲೆಯಲ್ಲಿ ಆಂಜನಾದ್ರಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹಸ್ರಾರು ಹನುಮ ಮಾಲಾಧಾರಿಗಳು ಈ ಬಾರಿ ಆಂಜನಾದ್ರಿ ಪ್ರವೇಶಾತಿ ಇದೆಯೋ ಇಲ್ಲವೋ ಎಂಬ ಗೊಂದಲದಲ್ಲೇ ಮಾಲಾವಿಸರ್ಜನೆ ಹಮ್ಮಿಕೊಂಡಿದ್ದರು.
ಕಿಕ್ಕಿರಿದು ತುಂಬಿದ್ದ ಹಂಪಿ, ಆಂಜನಾದ್ರಿ: ಆಂಜನಾದ್ರಿ ಬೆಟ್ಟಕ್ಕೆ ಪ್ರವೇಶ ಇಲ್ಲದಿರಬಹುದೆಂದು ಬಹುತೇಕ ಭಕ್ತರು ಹಂಪಿಯ ಯಂತ್ರೋದ್ಧಾರಕ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡು ಪವಿತ್ರ ಸ್ನಾನ ನೆರವೇರಿಸಿ ಮಾಲಾವಿಸರ್ಜಿಸಿದರು‌. ಇನ್ನೂ ಕೆಲವರು ನಗರದ ವಡಕರಾಯ ದೇವಸ್ಥಾನದಲ್ಲೇ ಮಾಲಾವಿಸರ್ಜನೆ ಕೈಗೊಂಡರು. ಆಂಜನಾದ್ರಿ ಬೆಟ್ಟಕ್ಕೆ ಪ್ರವೇಶ ಇರುವುದು ತಡವಾಗಿ ತಿಳಿದ ಕೆಲವರು ಸೀದಾ ಆಂಜನಾದ್ರಿಗೆ ತೆರಳಿದರು.

ದೇವಾಲಯ ಮೊದಲಿಗೆ ಪ್ರವೇಶ ನಿರಾಕರಿಸಿತ್ತು. ಭಜರಂಗ ದಳ ಸಭೆ ನಡೆಸಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1ರವರೆಗೂ ಪ್ರವೇಶಕ್ಕೆ ಅವಕಾಶ ಒದಗಿಸಿದರು.

  • ವಿಶ್ವನಾಥ್, ಹನುಮ ಭಕ್ತ